Monday, April 10, 2017

25 ಮಾರ್ಚ್ 1971: ಬಾಂಗ್ಲಾ ನರಮೇಧದ ದಿನ. Bangladesh Genocide day.

25 ಮಾರ್ಚ್ 1971: ಬಾಂಗ್ಲಾ ನರಮೇಧದ ದಿನ.


ನರಮೇಧವೆಂದರೆ ಉದ್ದೇಶಪೂರ್ವಕವಾಗಿ ಸಮುದಾಯವೊಂದರ ಮೇಲೆ ದೇಶ ಅಥವಾ ಭಿನ್ನ ಸಮುದಾಯದಿಂದ ನಡೆಯಲ್ಪಡುವ ಅಸಂಖ್ಯ ಜನರ ಮಾರಣಹೋಮ. ವಿಶ್ವ ಇತಿಹಾಸದ ವಿಜೃಂಭಿತ ಆಡುಂಬೋಲದಲ್ಲಿ, ಸೋಲು-ಗೆಲುವುಗಳ ರಕ್ತಸಿಕ್ತ ಪುಟಗಳಲ್ಲಿ ಅಸಂಖ್ಯ ನರಮೇಧಗಳು ನಡೆದಿವೆ. ಟರ್ಕರು, ಮಂಗೋಲಿಯನ್ನರು, ಜಪಾನಿಯರು, ಅಮೆರಿಕದ ಆಟಂ ಬಾಂಬ್‍ಗಳು, ಆಧುನಿಕ ಶಕ್ತಿಗಳು; ಹಿಟ್ಲರ್, ಮುಸೊಲೊನಿ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರುವಾರಿ ಜನರಲ್ ಓ ಡಯರ್, ಸದ್ದಾಂ ಹುಸೇನ್, ಐಎಸ್‍ಐಎಸ್‍ನಂತಹ ಮತಾಂಧ ಕೆಡುಕುಗಳು, ಅದೆಷ್ಟೋ ವಿನಾಶಕಾರಿ ಶಕ್ತಿಗಳು, ಯುದ್ಧಪಿಪಾಸು ನರಹಂತಕರು ಹೀಗೆ ಸಾವಿನ ವ್ಯಾಪಾರಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅರ್ಮೆನಿಯಾ, ರವಾಂಡ, ಸುಡಾನ್ ಮೊದಲಾದ ದೇಶಗಳ ಇತಿಹಾಸವೆಂದರೆ ಅದು ನರಮೇಧದ ಕರಾಳ ಇತಿಹಾಸವೆಂಬಂತಾಗಿಬಿಟ್ಟಿದೆ.

ಭಾರತ ಉಪಖಂಡದ ಚರಿತ್ರೆಯಲ್ಲಿಯೂ ಅಧಿಕಾರ ಗದ್ದುಗೆಗಾಗಿ, ಭೂಮಿಯ ಒಡೆತನಕ್ಕಾಗಿ, ಮತಾಂಧ ಶಕ್ತಿಗಳ ಸ್ವಾರ್ಥ ಸಾಧನೆಗಾಗಿ ಅಸಂಖ್ಯ ಮುಗ್ಧರ ಮಾರಣಹೋಮ ನಡೆದಿದೆ. 11-19ನೇ ಶತಮಾನದವರೆಗೂ ಅವಿರತವಾಗಿ ಹಾಗೂ ಅಸಂಖ್ಯವಾಗಿ ಭಾರತದಲ್ಲಿ ನಡೆದಿರುವ ನಿರ್ಲಕ್ಷ್ಯಕ್ಕೊಳಪಟ್ಟ ಅಗಣಿತ ನರಮೇಧಗಳು ಸಾಮ್ರಾಜ್ಯಗಳನ್ನು ಗಟ್ಟಿಗೊಳಿಸಿವೆ. ಕಾಲ ಬೃಹತ್ ಕೋಟೆ ಕೊತ್ತಲಗಳನ್ನೂ, ಪಾಪಕೂಪದ ಸಾಮ್ರಾಜ್ಯಶಾಹಿ ಶಕ್ತಿಗಳನ್ನೂ ಹೇಳಹೆಸರಿಲ್ಲದಂತೆ ನಿರ್ಣಾಮಗೊಳಿಸಿದೆ. 1946-47ರ ಹೊತ್ತಿಗೆ ಅಖಂಡ ಭಾರತದ ರಾಜಕೀಯ ವಿಭಜನೆಯ ಸಂದರ್ಭದಲ್ಲಿ ಧರ್ಮದ ಆಧಾರದಲ್ಲಿ ನಡೆದ ನರಮೇಧವನ್ನು ಆಧುನಿಕ ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹೈದರಾಬಾದ್ ಪ್ರಾಂತ್ಯದ ನಿಜಾಮರ ಕೊನೆಯ ದಿನಗಳಲ್ಲಿ ಆ ಪ್ರಾಂತ್ಯದ ಸಾವಿರಾರು ಜನರ ಮೇಲಿನ ಧರ್ಮಾದಾರಿತ ಕೊಲೆಗಳು, 1984ರ ಸಿಖ್ಖರ ನರಮೇಧ, ನಂತರದಲ್ಲಿ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರು, ಡೋಗ್ರಿಗಳು ಹಾಗೂ ಇತರರ ಮೇಲೆ ಅವ್ಯಾಗತವಾಗಿ ನಡೆದ-ನಡೆಯುತ್ತಿರುವ ನಿರಂತರ ಹಿಂಸಾಚಾರ, ಕೆಲವರನ್ನು ಗುರಿಯಾಗಿಸಿಕೊಂಡು ನಡೆದ ನರಮೇಧಗಳು ಎಣಿಸಲಾರದಷ್ಟು ಜನರ ಪ್ರಾಣಗಳನ್ನು ಕಿತ್ತುಕೊಂಡಿವೆ. ಈ ಮಧ್ಯೆ ನಡೆದಿರುವ ಅನೇಕ ಕೋಮುಗಲಭೆಗಳಲ್ಲಿನ ನರಮೇಧಗಳು ಮಾನವೀಯ ಮೌಲ್ಯಗಳನ್ನು ಹಿಂದಿಕ್ಕಿ ಸ್ವಾರ್ಥ, ಮತೀಯ ಮೌಢ್ಯಗಳನ್ನು ಮುನ್ನಲೆಗೆ ತಂದಿವೆ. ಇದರಲ್ಲಿ ಪರಸ್ಪರ ಕೆಸರೆರೆಚಾಟವೇ ನಡೆದಿದೆಯೇ ಹೊರತು ಸತ್ಯದ ಅನ್ವೇಷಣೆಯ ಅನಿವಾರ್ಯತೆ ಮತ್ತು ಸತ್ಯದ ಸಾಧ್ಯತೆಯ ಬುನಾದಿಯ ಮೇಲೆ ಸಾವಯವ ಸಮಾಜವನ್ನು ಕಟ್ಟುವ ಪ್ರಯತ್ನವಾಗಲಿಲ್ಲ.

ನಮ್ಮ ಉಪಖಂಡದ ಅನೇಕ ನರಮೇಧಗಳಿಗೆ ಸಾಕ್ಷಿಯಾಗಿದೆ. ಶ್ರೀಲಂಕಾ ದೇಶದ ಆಂತರಿಕ ಕಲಹದಲ್ಲಿ ಸತ್ತವರ ಸಂಕ್ಯೆಯೆಷ್ಟೋ? ಈ ಕುರಿತು ತನಿಖೆಯಿನ್ನೂ ಪ್ರಾರಂಭಗೊಂಡಿಲ್ಲ. ಪಾಕಿಸ್ತಾನದ ಪಂಜಾಬ್, ಸಿಂಧ್, ಗಿಲ್ಗಿಟ್, ಬಲೂಚಿಸ್ಥಾನ ಪ್ರಾಂತ್ಯಗಳಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ಅನಾಮತ್ತಾಗಿ ನರಮೇಧ ನಡೆಯುತ್ತಿದೆ. ತಾಲಿಬಾನ್ ಪೀಡಿತ ಅಫಘಾನಿಸ್ಥಾನಲ್ಲಿ ಶಾಂತಿಯೆಂಬುದು ಮರೀಚಿಕೆಯಾಗಿಯೇ ಉಳಿದಿದೆ. ಇನ್ನು ಬಾಂಗ್ಲಾದೇಶದ್ದು ಭಿನ್ನವಾದ ಕಥೆ.

ಭಾರತದ ಪೂರ್ವದಿಕ್ಕಿನಲ್ಲಿರುವ ನೆರೆಯ ರಾಷ್ಟ್ರ ಬಾಂಗ್ಲಾದೇಶದ ವಿಮೋಚನೆಯ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಅದರ ಸೇನೆ ತನ್ನ ನೈಜ ಸ್ವರೂಪವನ್ನು ಮತ್ತೊಮ್ಮೆ ಪ್ರದರ್ಶಿಸಿತು. ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದ ತನ್ನ ಚಾಳಿಯನ್ನು 1970-71ರ ಹೊತ್ತಿಗೆ ತನ್ನೆಲ್ಲ ಸಾಮಥ್ರ್ಯವನ್ನು ದುರುಪಯೋಗಪಡಿಸಿಕೊಂಡು ಬಾಂಗ್ಲಾದೇಶದ ಪ್ರಜೆಗಳ ಮೇಲೆ ನಿರಂತರ ಅತ್ಯಾಚಾರ, ದಬ್ಬಾಳಿಕೆ ಹಾಗೂ ಮಾರಣಹೋಮವನ್ನು ತೀವ್ರಗೊಳಿಸಿತ್ತು. ಈ ಕುರಿತು ಒಂದೇ ಒಂದು ವರದಿಯು ಪ್ರಕಟವಾಗದಂತೆ ಅದು ನೋಡಿಕೊಳ್ಳುತ್ತಿತ್ತು. ಹೊರಗಿನ ಪತ್ರಕರ್ತರಿಗೆ ಅಲ್ಲಿ ಪ್ರವೇಶವಿರಲಿಲ್ಲ. ಒಳಗಿನವರು ಪಾಕಿಸ್ತಾನದ ಸೇನೆಗೆ ವಿರುದ್ಧವಾಗಿ ಏನನ್ನೂ ಪ್ರಕಟಿಸುವಂತಿರಲಿಲ್ಲ. ಬಾಂಗ್ಲಾದೇಶವನ್ನು ಜೀವಂತ ದೇಶವಾಗಿ ಅದೆಂದೂ ಕಂಡಿರಲಿಲ್ಲ. ಭಾರತವನ್ನು ಒಡೆಯುವುದಕ್ಕೆ ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಕೇವಲ ದಾಳವಾಗಿತ್ತು. ಅಸಲಿಗೆ ತನ್ನ ದೇಶವನ್ನೇ ಸರಿಯಾಗಿ ಮುನ್ನಡೆಸಲು ಅಸಮರ್ಥ ದೇಶಕ್ಕೆ ಬಾಂಗ್ಲಾದೇಶ ಶೋಕಿಯ ಬೂಟಾಟಿಕೆಯಾಗಿತ್ತು. ಪೂರ್ವಪಾಕಿಸ್ತಾನ ಮೂಲ ಪಾಕಿಸ್ತಾನಕ್ಕೆ ಅಡಿಯಾಳಾಗಿದ್ದಂತಿತ್ತು. ಭಾರತದ ಇನ್ನಷ್ಟು ಪ್ರಾಂತ್ಯಗಳನ್ನು ಒಡೆದು ಮುಸ್ಲಿಂ ಬಾಹುಳ್ಯವಿರುವ ಅಖಂಡ ಪಾಕಿಸ್ತಾನವನ್ನು ಕಟ್ಟುವುದು ಅದರ ಗುರಿಯಾಗಿತ್ತು. ಭಾರತವನ್ನು ತುಂಡಾಗಿಸುತ್ತಾ ಇಡೀ ಉಪಖಂಡವನ್ನೇ ಕಬಳಿಸುವುದು ಅದರ ಉದ್ದೇಶವಾಗಿತ್ತು. ಆದರೆ ಸರ್ದಾರ್ ವಲ್ಲಭಬಾಯಿ ಪಟೇಲ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ರಾಜಸ್ಥಾನದ ಜೈಸಲ್‍ಮೆರ್‍ನಿಂದ ಅಸ್ಸಾಂಮಿನವರೆಗೆ ಭಾರತವನ್ನು ಒಂದುಗೂಡಿಸಿ ಉಕ್ಕಿನ ಮನುಷ್ಯರೆನಿಸಿಕೊಂಡರು.

ದಬ್ಬಾಳಿಕೆ, ಹಿಂಸೆ, ಕೊಲೆ ಮತ್ತು ಭಯದ ತಂತ್ರಗಳಿಂದ ಬಾಂಗ್ಲಾ ವಿಮೋಚನೆಯ ಹೋರಾಟವನ್ನು ಸುಲಭವಾಗಿ ಹತ್ತಿಕ್ಕಬಹುದೆಂಬುದು ಪಾಕಿಸ್ತಾನದ ಲೆಕ್ಕಾಚಾರವಾಗಿತ್ತು. ಆದರೆ ಅದರ ಊಹೆ ದಿನದಿಂದ ದಿನಕ್ಕೆ ಸುಳ್ಳಾಗುತ್ತಾ ಸಾಗಿತ್ತು. ಬಾಂಗ್ಲಾ ವಿಮೋಚನೆಗೆ ಭಾರತದ ಪರೋಕ್ಷ ಹಾಗೂ ಪ್ರತ್ಯಕ್ಷ ಬೆಂಬಲ ಹೋರಾಟಗಾರರ ಆಸ್ಥೆಯನ್ನು ಇಮ್ಮಡಿಗೊಳಿಸಿತ್ತು. ಪ್ರಾರಂಭದಲ್ಲಿ ಬಾಂಗ್ಲಾ ವಿಮೋಚನಾಕಾರ ಹೋರಾಟಗಾರರಿಗೆ ಭಾರತೀಯ ಭೂಸೇನೆ ಪಾಕಿಸ್ತಾನ ಸೇನೆಯ ವಿರುದ್ಧ ಹೋರಾಡಲು ಅಗತ್ಯ ತರಬೇತಿಯನ್ನು ನೀಡಿತು. ಸುಮ್ಮನೆ ಇರಲಾಗದ ಪಾಕಿಸ್ತಾನ ಭಾರತದ ವಾಯುನೆಲೆಗಳ ಮೇಲೆ ದಾಳಿಯನ್ನು ಮಾಡತೊಡಗಿತು. ಇದಕ್ಕುತ್ತರವಾಗಿ ಭಾರತ ಪಾಕಿಸ್ತಾನದ ಮೇಲೆ ನೇರ ಯುದ್ಧವನ್ನು ಸಾರಿತು. ಈ ಯುದ್ಧದಿಂದ ಕಂಗಾಲಾದ ಪಾಕಿಸ್ತಾನ ಎರಡು ಗಡಿಗಳನ್ನೂ ರಕ್ಷಿಸಿಕೊಳ್ಳಲಾಗದೆ ಭಾರತಕ್ಕೆ ಶರಣಾಯಿತು. 03 ಡಿಸೆಂಬರ್ 2017ಕ್ಕೆ ಪ್ರಾರಂಭವಾದ ಯುದ್ಧ ಕೇವಲ 13 ದಿನಗಳಲ್ಲಿ ಅಂದರೆ ಡಿಸೆಂಬರ್ 16, 1971ರಲ್ಲಿ ಢಾಕಾದ ಪತನದೊಂದಿಗೆ ಕೊನೆಗೊಂಡಿತು. ಹೀಗೆ ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟಿದ್ದ, ಅದರ ಸೇನೆಯ ಶೋಷಣೆಯಿಂದ ಬೇಸತ್ತಿದ್ದ ಪೂರ್ವ ಪಾಕಿಸ್ತಾನ 1971ರಲ್ಲಿ ಭಾರತದ ನೆರವಿನಿಂದ ಬಾಂಗ್ಲಾದೇಶವಾಗಿ ವಿಮೋಚನೆ ಪಡೆಯಿತು.
1971ರ ಮಾರ್ಚ್ 25ರಂದು ಏನಾಯಿತು?
1970ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಮುಜಿಬುರ್ ರೆಹಮಾನ್ ಬಹುಮತದಿಂದ ಗೆದ್ದಿದ್ದರೂ ಪಾಕಿಸ್ತಾನ ಸೇನೆ ಅಧಿಕಾರವನ್ನು ಹಸ್ತಾಂತರಿಸಲು ನಿರಾಕರಿಸಿತ್ತು. ಇದು ರಾಷ್ಟ್ರೀಯವಾದಿಗಳನ್ನು ಮೊದಲೇ ಕೆರಳಿಸಿತ್ತು. 1971ರ ಹೊತ್ತಿಗೆ ತಮ್ಮ ಬೇಡಿಕೆ ಮತ್ತು ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸತೊಡಗಿದ್ದರು. ಇದನ್ನು ಹೇಗಾದರೂ ದಮನಿಸಲೇಬೇಕೆಂಬ ಉದ್ದೇಶದಿಂದ 25 ಮಾರ್ಚ್ 1971ರಂದು ಪಾಕಿಸ್ತಾನ ಸೇನೆ ಜಮಾತ್-ಎ-ಇಸ್ಲಾಮಿ ಎಂಬ ಮೂಲಭೂತ ಸಂಘಟನೆಯೊಂದಿಗೆ ಸೇರಿಕೊಂಡು, ಬೆಂಗಾಲಿ ರಾಷ್ಟ್ರೀಯವಾದಿ ಚಳುವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ, ಢಾಕಾದಲ್ಲಿ ''ಆಪರೇಶನ್ ಸರ್ಚ್‍ಲೈಟ್(ಹುಡುಕುವ ದೀಪ)''ಅನ್ನು ಪ್ರಾರಂಭಿಸಿತು. 25ರ ಕರಾಳ ರಾತ್ರಿಯ ದಿನ ಢಾಕಾ ವಿಶ್ವವಿದ್ಯಾನಿಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಹಲ್ಲೆನಡೆಸಲಾಯಿತು. ಅಧಿಕೃತ ದಾಖಲೆಗಳ ಪ್ರಕಾರ 25ರ ರಾತ್ರಿ ಸುಮಾರು 7,000 ಜನರ ಹತ್ಯೆಯಾಯಿತು. 3,000 ಜನರನ್ನು ವಿನಾಕಾರಣ ಬಂಧಿಸಲಾಯಿತು. ಈ ಬೃಹತ್ ಆಘಾತದಿಂದ ಬೇಸತ್ತ ಬೆಂಗಾಲಿ ರಾಷ್ಟ್ರೀಯವಾದಿಗಳು ಮುಜಿಬುರ್ ರೆಹಮಾನ್ ನೇತೃತ್ವದಲ್ಲಿ "ಬಾಂಗ್ಲಾ ವಿಮೋಚನೆ ಅಥವಾ ಬಾಂಗ್ಲಾ ಸ್ವಾತಂತ್ರ್ಯ"ದ ಕರೆಯನ್ನು ನೀಡಲಾಯಿತು. ಇದೇ ಅಧಿಕೃತವಾಗಿ ವಿಮೋಚನಾ ಯುದ್ಧಕ್ಕೆ ನಾಂದಿಹಾಡಿತು. ಇದು 1942ರಲ್ಲಿ ಗಾಂಧೀಜಿ ನೀಡಿದ "ಭಾರತ ಬಿಟ್ಟು ತೊಲಗಿ"ಕರೆಯಷ್ಟೇ ಮಹತ್ವದ್ದು. ಬಾಂಗ್ಲಾ ವಿಮೋಚನಾ ಯುದ್ಧವನ್ನು ಸುಭಾಷ್ ಚಂದ್ರ ಬೋಸ್‍ರ ಇಂಡಿಯನ್ ನ್ಯಾಶನಲ್ ಆರ್ಮಿಯ ಸಮರದ ಪ್ರಯತ್ನಕ್ಕೆ ಸರಿಸಮಾನಾಗಿ ನೋಡಬಹುದು.

ಪಾಕಿಸ್ತಾನದ ಪ್ರತಿಕ್ರಿಯೆಯೇನು?
ರಾಷ್ಟ್ರೀಯವಾದಿಗಳ ಈ ಪ್ರತಿಕ್ರಿಯಾತ್ಮಕ ಬೆಳವಣಿಗೆಯನ್ನು ಅಪೇಕ್ಷಿಸದಿದ್ದ ಪಾಕಿಸ್ತಾನದ ಅಂದಿನ ಪ್ರಧಾನಿ ಜುಲ್ಫಿಕರ್ ಅಲಿ ಬುಟ್ಟೋ ಕಣ್ಣೊರೆಸುವ ತಂತ್ರವಾಗಿ ಮಾರ್ಚ್ 25ರ ನರಮೇಧವನ್ನು ತನಿಖೆ ನಡೆಸಲು ನ್ಯಾಯಾಂಗ ಸಮಿತಿಯನ್ನು ರಚಿಸುತ್ತಾರೆ. ಜಸ್ಟೀಸ್ ಹಮೂದುರ್ ನೇತೃತ್ವದ ಸಮಿತಿ ತಮ್ಮ ಆಮೆಗತಿಯ ತನಿಖೆಯನ್ನು 1974ರಲ್ಲಿ ಪೂರ್ಣಗೊಳಿಸುತ್ತಾರೆ. ಆ ತನಿಖೆಯ ವರದಿಯನ್ನು ಮೂರು ದಶಕಗಳ ಕಾಲ ಸಾರ್ವಜನಿಕವಾಗಿ ಬಹಿರಂಗಪಡಿಸಲಿಲ್ಲ. 2004ರಲ್ಲಿ ಸಾರ್ವಜನಿಕವಾಗಿ ಹೊರಬಂದ ವರದಿಯಲ್ಲಿ ಪಾಕಿಸ್ತಾನಿ ಸೇನೆಯ ಬೃಹತ್ ಪ್ರಮಾಣದ ಹಿಂಸಾಚಾರವನ್ನು ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ನಡೆದ ನರಮೇಧದ ಉನ್ನತ ತನಿಖೆ ನಡೆಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದು ಇಂದಿಗೂ ಜಾರಿಯಾಗಿಲ್ಲ. ನ್ಯಾಯಾಂಗ ಸಮಿತಿಯ ಪ್ರಕಾರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಹತ್ಯೆಗೀಡಾದವರ ಒಟ್ಟು ಸಂಖ್ಯೆ ಕೇವಲ 26,000 ಮಾತ್ರ. ಇದಂತು ಸತ್ಯದಿಂದ ದೂರವಾದ ಲೆಕ್ಕಾಚಾರ. ಆದರೆ ಬಾಂಗ್ಲಾದೇಶದ ಸರಕಾರಿ ದಾಖಲೆಗಳ ಪ್ರಕಾರ 1971ರ ಬಾಂಗ್ಲಾ ಸ್ವಾತಂತ್ರ್ಯ ಚಳುವಳಿಯಲ್ಲಿ ಕನಿಷ್ಟ 30,00,000ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 10,000 ಲಕ್ಷ ಜನರು ನಿರಾಶ್ರಿತರಾಗಿದ್ದರು. ಇವರಲ್ಲಿ ಹೆಚ್ಚಿನವರು ಅರಸಿ ಬಂದಿದ್ದು ಭಾರತದ ಆಶ್ರಯವನ್ನು. ಬಾಂಗ್ಲಾದೇಶಿಯರ ಮೇಲೆ, ಮಾನವೀಯತೆಯ ಮೇಲೆ ಇಷ್ಟೆಲ್ಲ ಹಿಂಸಾಚಾರ, ಅನಾಚಾರ, ಮಾರಣಹೋಮಗಳಿಗೆ ಕಾರಣವಾದ ಪಾಕಿಸ್ತಾನ ತನ್ನ ದುಷ್ಕøತ್ಯಗಳಿಗೆ ಶಿಕ್ಷೆ ಅನುಭವಿಸುವುದು ದೂರತ ಮಾತು ಕನಿಷ್ಟ ಕ್ಷಮೆಯನ್ನೂ ಕೋರಿಲ್ಲ. ಇದು ಅದರ ದಾಷ್ಟ್ಯದ ಆಂತರಿಕ ಸಹಜ ರೂಪ. ತಪ್ಪನ್ನು ಒಪ್ಪಿಕೊಳ್ಳದ, ತಪ್ಪಿನ ಅರಿವೇ ಇಲ್ಲದ ದೇಶಕ್ಕೆ ಮಾತ್ರ ಯಾವುದೇ ಪಾಪಪ್ರಜ್ಞೆಯಿಲ್ಲದೆ ಸದಾಕಾಲ ಭಯೋತ್ಪಾದನೆಯ ತಳಿಸಂವರ್ಧನೆಯ ಕೇಂದ್ರವಾಗಿ ಮುಂದುವರೆಯಲು ಸಾಧ್ಯ.

ನರಮೇಧದ ದಿನವಾಗಿ:
ಅನೇಕ ವರ್ಷಗಳಿಂದ ಬಾಂಗ್ಲಾ ವಿಮೋಚನಾ ಸಂದರ್ಭದಲ್ಲಿ ಅಸಂಖ್ಯ ಜನಸಾಮಾನ್ಯರ ಮೇಲೆ ಪಾಕಿಸ್ತಾನ ನಡೆಸಿದ ಹಿಂಸಾಚಾರಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಾಗಬೇಕೆಂಬುದು ಎಲ್ಲಾ ವರ್ಗದವರ ಒತ್ತಾಸೆಯಾಗಿತ್ತು. ಇದಕ್ಕಾಗಿ ಅನೇಕ ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಪಕ್ಷಗಳು, ನಾಗರಿಕ ಸಮಾಜ ಅನೇಕ ಸಂದರ್ಭಗಳಲ್ಲಿ ಈ ಸಂಗತಿಯನ್ನು ಮುನ್ನಲೆಗೆ ತರುವ ಪ್ರಯತ್ನವನ್ನು ಮಾಡಲಾಗುತ್ತಿತ್ತು. ಬಾಂಗ್ಲಾದೇಶದ ಸಂಸತ್ತಿನಲ್ಲಿ ಅನೇಕ ಬಾರಿ ಈ ಕುರಿತು ನಿರ್ಣಯವನ್ನು ತೆಗೆದುಕೊಳ್ಳುವಂತೆ ಚರ್ಚೆಗಳಾಗಿತ್ತು. ಅದರಂತೆ 11 ಮಾರ್ಚ್ 2017ರಂದು ಬಾಂಗ್ಲಾದೇಶದ ಲೋಕಸಭೆ ಈ ನಿರ್ಣಯವನ್ನು ಅಂಗೀಕರಿಸುವಂತೆ ಹಕ್ಕೊತ್ತಾಯವನ್ನು ಮಂಡಿಸಲಾಯಿತು. ಶೇಕ್ ಹಸಿನಾ ಸರಕಾರ 25 ಮಾರ್ಚ್‍ಅನ್ನು ನರಮೇಧದಿನವನ್ನಾಗಿ ಗುರುತಿಸಲು ಒಪ್ಪಿಕೊಂಡಿತು. ಅಂತರಾಷ್ಟ್ರೀಯ ಮಟ್ಟದಲ್ಲೂ ಈ ಕುರಿತು ಧ್ವನಿಯೆತ್ತಲು ಕ್ರಮಕೈಗೊಂಡಿದೆ. ವಿಶ್ವಸಂಸ್ಥೆ ಈಗಾಗಲೇ ಡಿಸೆಂಬರ್ 9ರಂದು ಅಂತರಾಷ್ಟ್ರೀಯ ನರಮೇಧದ ದಿನವನ್ನಾಗಿ ಗುರುತಿಸಿದೆ. ಅದರ ಜೊತೆಗೆ ಮಾರ್ಚ್ 25ನ್ನೂ ನರಮೇಧದ ದಿನವನ್ನಾಗಿ ಗುರುತಿಸುವ ಮೂಲಕ ಅಸಂಖ್ಯ ಅಮಾಯಕರ ಬಲಿದಾನವನ್ನು ಗುರುತಿಸಬೇಕೆನ್ನುವುದು ಮತ್ತು ಪಾಕಿಸ್ತಾನ ನಡೆಸಿದ ಸಮಗ್ರ ಹಿಂಸಾಚಾರಗಳು ಲೋಕದ ಕಾಣ್ಕೆಗೆ ಬರಬೇಕೆಂಬುದು ಇದರ ಸದಾಶಯ.

ಪ್ರಸ್ತುತ ಸನ್ನಿವೇಶವೇನು?
ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶ ಪಾಕಿಸ್ತಾನದೊಂದಿಗೆ ಕೈಜೋಡಿಸಿ ದೇಶವಿರೋಧಿ ಕೃತ್ಯವೆಸಗಿದ ತನ್ನ ನೆಲದೊಳಗಿನ ಜಮಾತ್-ಎ-ಇಸ್ಲಾಮಿ ಸಂಘಟನೆಯಂತಹ ಯುದ್ಧ-ಅಪರಾಧಿಗಳನ್ನು(ವಾರ್ ಕ್ರಿಮಿನಲ್ಸ್) ನ್ಯಾಯಯುತವಾಗಿ ಶಿಕ್ಷಿಸಲು ಪ್ರಾರಂಭಿಸಿದೆ. ಅಂದಿನಿಂದಲೂ ಪಾಕಿಸ್ತಾನದೊಂದಿಗಿನ ದ್ವಿಪಕ್ಷಿಯ ಸಂಬಂಧ ಬಿರುಕುಗೊಳ್ಳತೊಡಗಿದೆ. ಈಗ ಬಾಂಗ್ಲಾದೇಶ ತನ್ನ ದೇಶದ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳನ್ನು ವಿಶ್ವಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಕಳುಹಿಸಿ ಮಾರ್ಚ್ 25ನ್ನು "ಅಂತರಾಷ್ಟ್ರೀಯ ಬಾಂಗ್ಲ ನರಮೇಧ"ವನ್ನಾಗಿ ಪರಿಗಣಿಸಲು ಕೇಳಿಕೊಂಡಿದೆ. ಇದು ಮಾನ್ಯವಾದರೆ ಪಾಕಿಸ್ತಾನ ನಡೆಸಿದ ಎಲ್ಲಾ ಬಗೆಯ ಹಿಂಸಾಚಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತನಿಖೆಯಾಗುವ ಅವಕಾಶದೊರೆತಂತಾಗುತ್ತದೆ.

ಭಾರತದೊಂದಿಗೆ ಬಾಂಗ್ಲಾ:
1971ರಲ್ಲಿ ಬಾಂಗ್ಲಾ ವಿಮೋಚನೆಯಾದಾಗಿನಿಂದಲೂ, ಆ ದೇಶಕ್ಕೆ ಭಾರತ ಮೊದಲ ಮಿತ್ರ. ತನ್ನ ಬಿಡುಗಡೆಗೆ ಶ್ರಮಿಸಿದ ಏಕೈಕ ರಾಷ್ಟ್ರ ಎಂಬ ಅರಿವಿನ ಜೊತೆಗೆ ತನ್ನೆಲ್ಲ ಮೂಲಭೂತ ಬೆಳವಣಿಗೆಗೂ ಅದು ಅವಲಂಬಿತವಾಗಿರುವುದು ಭಾರತದ ಮೇಲೆ. ದಿವಂಗತ ಪಿವಿ ನರಸಿಂಹರಾವ್ ಆರಂಭಿಸಿದ "ಪೂರ್ವಕ್ಕೆ ನೋಡು" ಯೋಜನೆ ಮೋದಿಯವರ ಕಾಲದಲ್ಲಿ "ಪೂರ್ವದತ್ತ ಕಾರ್ಯನಿರ್ವಹಿಸು" ಆಗಿ ಪರಿವರ್ತನೆಯಾಗಿರುವುದು ಬಾಂಗ್ಲಾದೇಶ, ಮ್ಯಾನ್ಮಾರ್ ದೇಶಗಳಿಗೆ ವರದಾನ. ಸಾಗರ ಕೇಂದ್ರಿತ ನೀಲಿ ಆರ್ಥಿಕತೆಯಿಂದ ನೀರು, ವಿದ್ಯುತ್, ಅಂತರ್ಜಾಲ ಸಂಪರ್ಕದವರೆಗೆ ಬಾಂಗ್ಲಾದೇಶ ಅವಲಂಬಿತವಾಗಿರುವುದು ಭಾರತದ ಮೇಲೆ. ಅದೇ ರೀತಿ ಸದೃಢ ಬಾಂಗ್ಲಾದೇಶ ಭಾರತದ ಪೂರ್ವಾಂಚಲ ದೇಶಗಳ ಸುಸ್ಥಿರತೆ ಮತ್ತು ಬೆಳವಣಿಗೆಗೆ ಪೂರಕ. ತ್ರಿಪುರ ರಾಜ್ಯಕ್ಕೆ ವಿದ್ಯುತ್, ಸಂಪರ್ಕ ಹಾಗೂ ಜಲಸಾರಿಗೆ ವ್ಯವಸ್ಥೆ ದೊರೆಯುತ್ತಿರುವುದು ಬಾಂಗ್ಲಾದೇಶದಿಂದ. 2014ರ ಲ್ಯಾಂಡ್ ಬೌಂಡರಿ ಅರ್ಗಿಮೆಂಟ್ ಎರಡೂ ದೇಶಗಳ ನಡುವಿನ ಶಾಶ್ವತ ಸಹಕಾರಕ್ಕೆ ಬುನಾದಿಯಾಗಲಿದೆ. ಎರಡೂ ದೇಶಗಳು ಬಂಗಾಳ ಕೊಲ್ಲಿ ಬಹುಕ್ಷೇತ್ರಿಯ ಮತ್ತು ಆರ್ಥಿಕ ಸಹಯೋಗದಡಿ "ಬಿಮ್ಸ್‍ಟೆಕ್" ವಿಶೇಷವಾಗಿ ಪರಸ್ಪರ ಬೆಳವಣಿಗೆ ಹಾಗೂ ಭಯೋತ್ಪಾದನಾ ನಿಗ್ರಹಕ್ಕಾಗಿ ಜಂಟಿಯಾಗಿ ಹೋರಾಡುತ್ತಿವೆ. ಇದು ಬಾಂಗ್ಲಾ ದೇಶದ ನರಮೇಧೀಯ ಇತಿಹಾಸದಿಂದ ಹೊರಬರುವುದಕ್ಕೆ ಹಾಗೂ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ ಸಹಾಯಕವಾಗಲಿದೆ.

ನವ ಬಾಂಗ್ಲಾದೇಶ ಬದಲಾಗಬಯಸುತ್ತಿದೆ. ಅದೇ ಹೊತ್ತಿಗೆ ಅನೇಕ ಸ್ವಯಂತಂತ್ರವಾದಿ, ಉದಾರವಾದಿ ಮುಕ್ತ ಚಿಂತಕ ಬರಹಗಾರರ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಬಡ ಅಲ್ಪಸಂಖ್ಯಾತ ಪಾಡು ಶೋಚನೀಯವಾಗಿದೆ. ಪ್ರಜಾಪ್ರಭುತ್ವ ಬಂದಿದ್ದರೂ ಆಗಾಗ ಅರಾಜಕ ಸಮಾಜದ ದೌರ್ಬಲ್ಯ ಗೋಚರಿಸುತ್ತದೆ. ಅಲ್ಲಿನ ಜನರ ಜೀವನಮಟ್ಟ ಇಂದಿಗೂ ಸುಧಾರಿಸಿಲ್ಲ. ಶ್ರೀಮಂತ ಮತ್ತು ಬಡವರ ಹಾಗೂ ಅಭಿವೃದ್ಧಿಹೊಂದಿದ ಮತ್ತು ಹಿಂದುಳಿದವುಗಳ ಕಂದಕ ಆಳವಾಗಿದೆ. ಇದರ ಜೊತೆಗೆ ನಿರುದ್ಯೋಗ ಮತ್ತು ಜನಸಂಖ್ಯಾಸ್ಫೋಟ, ತಳಮಟ್ಟದಲ್ಲಿ ಉತ್ತಮ ಅವಕಾಶಗಳ ಕೊರತೆಯ ಪರಿಣಾಮ ಹೊರ-ವಲಸೆ ಅನಾಯಾಸವಾಗಿ ಮುಂದುವರೆದಿದೆ.

ನರಮೇಧದ ಕಹಿ ನೆನಪುಗಳನ್ನು ಮುಖ್ಯಭೂಮಿಕೆಯ ಚರ್ಚೆಯ ನೆಲೆಗೆ ತಂದು ದೇಶ ವಿಮೋಚನೆಗಾಗಿ ಬಲಿಯಾದ ಅಮಾಯಕರನ್ನು ಗುರುತಿಸುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಬೇಕಾದ್ದು ಅನಿವಾರ್ಯವೇ. ಅದೇ ರೀತಿ ತನ್ನ ಗತದ ತಪ್ಪುಗಳನ್ನು ತಿದ್ದಿಕೊಂಡು ಮುಂದುವರೆಯಬೇಕಾದ್ದು ಕಾಲದ ಅನಿವಾರ್ಯತೆ ಕೂಡ. ಆದರೆ ತನ್ನ ಗತವನ್ನು ಹಿಂದಿಕ್ಕಿ ಅಭಿವೃದ್ಧಿಹೊಂದಲು ಬಯಸುತ್ತಿರುವ ಬಾಂಗ್ಲಾದೇಶ ಇಂದಿಗೂ ಪಾಕಿಸ್ತಾನದ ಆಳ್ವಿಕೆಯ ರಿಕ್ಥತೆಯನ್ನು ಹುದುಗಿಸಿಕೊಂಡು ಸಂಕೀರ್ಣ ಬೆಳವಣಿಗೆಯ ಹಾದಿಯನ್ನು ಹಿಡಿದಿರುವಂತೆ ತೋರುತ್ತದೆ. ಮೂಲಭೂತವಾದದ ಛಾಯೆ ನವ ಸಮಾಜದಲ್ಲಿಯೂ ಆಳವಾಗಿ ಬೇರುತ್ತಿರುವುದು ಹಾಗೂ ತಸ್ಲೀಮಾ ನಸ್ರೀನ್‍ರ 'ಲಜ್ಜಾ'ದಲ್ಲಿ ಕಾಣುವ ಚಿತ್ರಣ ಇಂದಿಗೂ ಮುಂದುವರೆಯುತ್ತಿರುವುದು ಬಾಂಗ್ಲಾದ ಭವಿತ್ಯಕ್ಕೆ ಮಾರಕವಾದ ಸಂಗತಿ. ನರಮೇಧದ ಭಯಂಕರ ದಿನಗಳನ್ನು ಅನುಭವಿಸಿದ ದೇಶಕ್ಕೆ ಪ್ರತಿಯೊಂದು ಜೀವದ ಬೆಲೆಯೂ ಚೆನ್ನಾಗಿ ತಿಳಿದಿರಬೇಕು. ಇಲ್ಲವಾದಲ್ಲಿ ಹಿಂಸೆಯ ವಿರಾಟ್ ಸ್ವರೂಪ, ಸಾಂಸ್ಥಿಕ ರೂಪದಿಂದ ಸಾಮಾಜಿಕ ಸ್ವರೂಪದಲ್ಲಿ ನಿರಂತರವಾಗಿ ಮುಂದುವರೆಯುವ ಅಪಾಯವಿದೆ. ಈಗಿನ ಬಾಂಗ್ಲಾದೇಶ,  ರವೀಂದ್ರನಾಥ ಟ್ಯಾಗೋರ್ ಬರೆದಂತೆ "ಅಮರ್ ಸೋನಾ ಬಾಂಗಾ" ಆಗಬೇಕಾದರೆ ಪಾಕಿಸ್ತಾನದ ಜಾಡನ್ನು ಸಂಪೂರ್ಣವಾಗಿ ಕಳಚಿಕೊಂಡು ತನ್ನೊಳಗಿನ ಅಮರಪ್ರಜ್ಞೆಯಿಂದ ಅದು ಎದ್ದುಬರಬೇಕು. ಯಾಕೆಂದರೆ 21ನೇ ಶತಮಾನ ಭಾರತ ಉಪಖಂಡದ್ದಾಗಬೇಕಾದರೆ ಬಾಂಗ್ಲಾ ಸಂದಿಯಲ್ಲಿ ಹಾಗೆಯೇ ಮುಳುಗಿಹೋಗಬಾರದು. ನರಮೇಧದ ಸಾಕ್ಷಿಪ್ರಜ್ಞೆ ನವಸಮಾಜದ ನವನವೋನ್ಮೇಶಶಾಲಿ ನಾಡಿಗೆ-ನಾಳೆಗೆ ನಾಂದಿಹಾಡಲಿ.
….

Tuesday, January 31, 2017

Budget 2017-18 Preview. Sailing in the turbulent world and beyond.

ಕೇಂದ್ರ ಬಜೆಟ್: ಸವಾಲುಗಳು ಹಲವು, ಸಮಾಧಾನವೇ ಉತ್ತರ.


(ವಿ.ಸೂ.: ಈ ಲೇಖನವನ್ನು ಎರಡು ಭಾಗಗಳಲ್ಲಿ ನೋಡಬಹುದು. ಮೊದಲ ಭಾಗದಲ್ಲಿ ಬಜೆಟ್ ಹಾಗೂ ಈ ಬಾರಿಯ ಬಜೆಟ್‍ಗೆ ಪೂರ್ವಭೂಮಿಕೆ. ಎರಡನೇ ಭಾಗದಲ್ಲಿ ಈ ಬಾರಿಯ ಜೇಟ್ಲಿ ಬಜೆಟ್ ಮುಂದಿರುವ ಸವಾಲು, ನಿರೀಕ್ಷೆ ಹಾಗೂ ಸಾಧ್ಯತೆಗಳು. ಎರಡೂ ಭಾಗಗಳೂ ಅವಿಚ್ಛಿನ್ನ. ಒಂದಕ್ಕೊಂದು ಪೂರಕ.)


https://twitter.com/ShreyankaRanade/status/826502454938202113


ಕೇಂದ್ರ ಸರಕಾರದ ಕಾರ್ಯವೈಖರಿಯ ಪ್ರಮಾಣಪತ್ರವೇ ವರ್ಷಂಪ್ರತಿ ರಾಷ್ಟ್ರಪತಿಗಳ ಪರವಾಗಿ ವಿತ್ತ ಸಚಿವರು ಮಂಡಿಸುವ ದೇಶದ ಮುಂಗಡಪತ್ರ. ಸಂವಿಧಾನದ 112ನೇ ಕಲಂ ಪ್ರಕಾರ ಸರಕಾರ ಪ್ರತೀ ವರ್ಷ ವಾರ್ಷಿಕ ಆಯವ್ಯವನ್ನು ಮಂಡಿಸಬೇಕು. "ಬಜೆಟ್" ಎಂಬ ಪದ ಜನಪ್ರಿಯ ಬಳಕೆಯಷ್ಟೆ. ಹಿಂದಿನ ಸಾಲಿನ ವಿತ್ತೀಯ ನಿರ್ವಹಣೆಯ ಆಧಾರದಲ್ಲಿ ಮುಂಬರುವ ವಿತ್ತೀಯ ವರ್ಷದಲ್ಲಿ ಅಂದರೆ 2017-18ರಲ್ಲಿ ಸರಕಾರ ಅದರ ಆದಾಯ, ಖರ್ಚು-ವೆಚ್ಚಗಳನ್ನು ಹೇಗೆ ನಿಭಾಯಿಸಲಿದೆ? ದೇಶದ ಬೆಳವಣಿಗೆ, ಅಭಿವೃದ್ಧಿಗೊಂದು ಸ್ಪಷ್ಟ ದಾರಿ ಒದಗಿಸಲಿದೆಯೇ? ಎಂಬುದರ ಶ್ವೇತ ಪತ್ರವೇ ಕೇಂದ್ರ ಬಜೆಟ್. ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ತಯಾರಿಸಿ ವಿತ್ತಸಚಿವರು ಮಂಡಿಸುವ ಬಜೆಟ್ ಭಾಷಣದಲ್ಲಿ ಸರಕಾರದ ಆದಾಯದ ಅಂದಾಜು, ಖರ್ಚಿನ ವಿವರ ಎಂಬ ಎರಡು ಭಾಗಗಳಲ್ಲಿ ಮುಂದಿನ ಸಾಲಿನ ಆಯವ್ಯವದ ಚಿತ್ರಣವನ್ನು ನೀಡಲಾಗುತ್ತದೆ. ಅದೇ ರೀತಿ ಬಜೆಟ್ ಭಾಷಣದ ಒಂದು ದಿನ ಮುನ್ನ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರು (ಅರವಿಂದ್ ಸುಬ್ರಮಣ್ಯಮ್) ಹಿಂದಿನ ಸಾಲಿನ ಆರ್ಥಿಕ ನಿರ್ವಹಣೆಯ ಸವi ಗ್ರ ಚಿತ್ರಣ ನೀಡುವ ಹಾಗೂ ಮುಂದಿನ ವರ್ಷದಲ್ಲಿ ಸಾಗಬೇಕಾದ ಆರ್ಥಿಕ ದಾರಿಯ ಸಮೀಕ್ಷಣೆಯ 'ಎಕನಾಮಿಕ್ ಸರ್ವೆ 2016-17' ಮಂಡಿಸುವುದು ವಾಡಿಕೆ. ಇದರ ಹಿನ್ನಲೆಯಲ್ಲಿಯೇ ಸರಕಾರದ ಆರ್ಥಿಕ ನೀತಿಯ ಸ್ವರೂಪ, ಸೋಲು-ಗೆಲುವು ನಿರ್ಧರಿತವಾಗುತ್ತದೆ.

ಸ್ವತಂತ್ರ ಭಾರತದ ಇತಿಹಾದಲ್ಲಿ ಮೂರು ಪ್ರಥಮಗಳಿಗೆ ಸಾಕ್ಷಿಯಾಗುತ್ತಿರುವ ಇಂದಿನ ಬಜೆಟ್ ಅನೇಕ ಕಾರಣಗಳಿಂದ ಮುಖ್ಯವಾಗಿದೆ. ಮೊದಲನೆಯದಾಗಿ ಕೇಂದ್ರ ಬಜೆಟ್ ಫೆಬ್ರವರಿ ಕೊನೆಯ ದಿನದ ಬದಲಾಗಿ ಮೊದಲ ದಿನವೇ ಮಂಡನೆಯಾಗುತ್ತಿರುವುದು. ಬಜೆಟ್ ಮಂಡನೆಯಾಗಿ ಜಾರಿಯಾಗುವುದಕ್ಕೆ 2-3 ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಮೊದಲು ವಿತ್ತ ಸಚಿವರು ಬಜೆಟ್ ಮಂಡಿಸಿ ಕಲಾಪಕ್ಕೆ ಒಂದು ತಿಂಗಳ ವಿರಾಮವನ್ನು ನೀಡಲಾಗುತ್ತದೆ. ನಂತರ 24 ಡಿಪಾರ್ಟ್‍ಮೆಂಟಲ್ ಸ್ಟಾಂಡಿಂಗ್ ಕಮಿಟಿಗಳು ಬಜೆಟ್ ಅನ್ನು ವಿಸ್ತøತವಾಗಿ ಅಧ್ಯಯನಿಸುತ್ತಾರೆ. ಈ ಸಮಯದಲ್ಲಿ ಬಜೆಟ್‍ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗುತ್ತದೆ. ಪ್ರತೀ ಇಲಾಖೆಗಳಿಗೆ ಹಂಚಿಕೆಯಾದ ಹಣಕಾಸಿನ ಬಗ್ಗೆ ವಿಸ್ತøತ ಚರ್ಚೆಯಾಗುತ್ತದೆ. ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಸಲ್ಲಿಸಲಾಗುತ್ತದೆ. ನಂತರ ಲೋಕಸಭೆಯಲ್ಲಿ ಮುಂಗಡಪತ್ರವನ್ನು ಮತಕ್ಕೆ ಹಾಕಲಾಗುತ್ತದೆ. ಸಾಮಾನ್ಯವಾಗಿ ಲೋಕಸಭೆಯಲ್ಲಿ ಬಹುಮತ ಹೊಂದಿರುವ ಸರಕಾರಕ್ಕೆ ಇದನ್ನು ಜಾರಿಗೊಳಿಸುವುದು ಕಷ್ಟವಲ್ಲ. ಒಂದು ವೇಳೆ ಇದರಲ್ಲಿ ಸರಕಾರ ಸೋತರೆ ಸರಕಾರ ಉರುಳಿದಂತೆಯೇ. ಈ ಪ್ರಕ್ರಿಯೆಯಲ್ಲಿ ಸರಕಾರ, ನೀತಿ ಆಯೋಗ, ವಿವಿಧ ಇಲಾಖೆಗಳು ಮುಂದಿನ ಸಾಲಿಗೆ ಅಗತ್ಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತವೆ. ಏಪ್ರಿಲ್ ಒಂದರಿಂದಲೇ ಹೊಸ ಹಣಕಾಸು ವರ್ಷ ಪ್ರಾರಂಭವಾದರೂ ಹಣ ಬಿಡುಗಡೆಯಾಗಿ ಬರುವುದು ಜೂನ್-ಜುಲೈ ಹೊತ್ತಿಗೆ. ಈ ಹಂತದಲ್ಲಿ ಹಣ ಬಿಡುಗಡೆಯಾಗದೆ ಮುಂಗಾರು ಪೂರ್ವದ ಅತ್ಯಂತ ಉತ್ಪಾದಕ ದಿನಗಳು ಅನ್ಯಾಯವಾಗಿ ಪೋಲಾಗುತ್ತವೆ. ಇದರಿಂದ ದೇಶಕ್ಕಾಗುವುದು ಕೇವಲ ನಷ್ಟ. ಇದನ್ನು ಮೊದಲ ಬಾರಿಗೆ ದೂರೀಕರಿಸುವ ಪ್ರಯತ್ನವೊಂದು ಈ ಬಜೆಟ್ ಮೂಲಕ ಸಾಧ್ಯವಾಗುತ್ತದೆ. ಆ ಮೂಲಕ ಬಜೆಟ್ ಮಂಡನೆಯ ಬಳಿಕ ಸಾಕಷ್ಟು ಸಮಯ ದೊರೆಯುವುದಲ್ಲದೇ, ಏಪ್ರಿಲ್ ಮೊದಲ ವಾರದಲ್ಲಿಯೇ ವಿವಿಧ ಇಲಾಖೆಗಳಿಗೆ ಹಣಕಾಸು ಒದಗುವುದರಿಂದ ಅಭಿವೃದ್ಧಿ ಕಾರ್ಯಗಳು ಕ್ಷಿಪ್ರಗೊಂಡು, ಅತ್ಯಮೂಲ್ಯ ಎರಡು ಮೂರು ತಿಂಗಳ ಜಡವಾಗಿ ಕಳೆದುಹೊಗುತ್ತಿದ್ದ ಸಮಯ ದೇಶದ ಬೆಳವಣಿಗೆಗೆ ಉಪಕಾರಿಯಾಗಿರಲಿದೆ. ಈ ಯೋಚನೆಯೇ ಕ್ರಾಂತಿಕಾರಿ.

ಎರಡನೆಯದಾಗಿ ಸ್ವಾತಂತ್ರ್ಯ ಪೂರ್ವ ಬ್ರಿಟೀಷ್ ಆಡಳಿತದ ಭಾರತದಲ್ಲಿ, 1921ರಲ್ಲಿ ಅಕ್ವಾರ್ಥ್ ಸಮಿತಿಯ ಶಿಫಾರಸ್ಸಿನ ಅನ್ವಯ ಅತ್ಯಧಿಕ ಆದಾಯವನ್ನು ತಂದುಕೊಡುತ್ತಿದ್ದ ರೈಲ್ವೆ ಇಲಾಖೆಯ ಬಜೆಟ್‍ಅನ್ನು ಜನರಲ್ ಬಜೆಟ್‍ನಿಂದ ಬೇರ್ಪಡಿಸಲಾಯಿತು. ಸ್ವಾತಂತ್ರ್ಯ ನಂತರ ರೈಲ್ವೆ ಇಲಾಖೆಯ ಆದಾಯ ಹಾಗೂ ಲಾಭ ಇಳಿಮುಖವಾಗುತ್ತಾ ಸಾಗಿದ್ದರೂ ಅಂದಿನಿಂದ ಇಂದಿನವರೆಗೂ ಅಂದರೆ ಕಳೆದ 95 ವರ್ಷಗಳಿಂದಲೂ ಇದೇ ಮಾದರಿಯನ್ನು ಕುರುಡಾಗಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಇತ್ತೀಚಿನವರೆಗೂ ರೈಲ್ವೆ ಬಜೆಟ್ ಎಂಬುದು ಬಹುದೊಡ್ಡ ಮತಬಾಚಿಕೊಳ್ಳುವ ಜನಪ್ರಿಯ ಸಾಧನವಾಗಿತ್ತೇ ಹೊರತು ರೈಲ್ವೆಯಂತಹ ಸಮರ್ಥ, ಶಕ್ತಿಶಾಲಿ ಹಾಗೂ ಲಾಭಪಡೆಯಬಲ್ಲ ಇಲಾಖೆಯಾಗಿ ರೂಪಾಂತರಗೊಂಡಿರಲಿಲ್ಲ. ಬಜೆಟ್ ವಿಲೀನದ ನಿರ್ಧಾರವೊಂದರಿಂದಲೇ ಹಣಕಾಸು ಕೊರತೆಯಿಂದ ಬಳಲುತ್ತಿರುವ ರೈಲ್ವೆಗೆ 10,000 ಕೋಟಿಯ ಆದಾಯ ಬರಲಿದೆ. ಎರಡೂ ಬಜೆಟ್ ಒಂದರಲ್ಲೇ ವಿಲೀನಮಾಡುತ್ತಿರುವ ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಕೇವಲ ಬಜೆಟ್ ಭಾಷಣದ ಅವಧಿ ದೀರ್ಘವಾಗುವುದಷ್ಟೇ ಅಲ್ಲ, ಭಾರತೀಯ ರೈಲ್ವೆ ಇಲಾಖೆಯ ಆದಾಯ, ಹೂಡಿಕೆ ಹಾಗೂ ಲಾಭ ಇಮ್ಮಡಿಯಾಗಲಿದೆ. ರೈಲ್ವೆಗೆ ಹೊಸ ಚೈತನ್ಯ ತುಂಬಿ, ಸ್ಪಷ್ಟ ಕಾಯಕಲ್ಪ ಒದಗಿಸಿ, ಸೂಕ್ತ ದಿಕ್ಸೂಚಿಯನ್ನು ನೀಡಿ, ಪ್ರವರ್ತಕ ಮನ್ವಂತರವನ್ನು ತರಲು ಹೊರಟಿರುವ ಕೇಂದ್ರ ಸರಕಾರದ ಆಶಯಕ್ಕೆ ಸೂಕ್ತ ವೇದಿಕೆಯಾಗಲಿದೆ.

ಮೂರನೆಯದಾಗಿ ಸ್ವಾತಂತ್ರ್ಯ ನಂತರ ಸೋವಿಯತ್ ರಷ್ಯಾದ ಪಂಚವಾರ್ಷಿಕ ಯೋಜನೆಗಳನ್ನೇ ಭಾರತದಲ್ಲಿ ಜಾರಿಗೆ ತರಲಾಯಿತು. ರಷ್ಯಾದ ಪತನದ ನಂತರ ಪಂಚವಾರ್ಷಿಕ ಯೋಜನೆಗಳ ಮಿತಿಗಳು, ಸೋಲು ಗೋಚರಿಸತೊಡಗಿತು. ಅನೇಕ ದೇಶಗಳು ಪಂಚವಾರ್ಷಿಕ ಯೋಜನೆಯೆಂಬ ನೀತಿಯನ್ನು ತೆಗೆದುಹಾಕಿದವು. ಆದರೆ ಭಾರತ ಮಾತ್ರ ಈ ವರ್ಷ ಕೊನೆಗೊಳ್ಳಲಿರುವ 2012-2017ರ 12ನೇ ಪಂಚವಾರ್ಷಿಕ ಯೋಜನೆಯವರೆಗೂ ಇದೇ ಮಾದರಿಯಲ್ಲಿ ಸಾಗಿಕೊಂಡು ಬಂದಿತ್ತು. ಕೇವಲ ಬೃಹತ್ ಕೈಗಾರಿಕೆಗಳಿಗೆ ಮನ್ನಣೆಕೊಟ್ಟು ಆರ್ಥಿಕತೆಗೆ ದೊಡ್ಡ ಜಿಗಿತವನ್ನು ಕೊಟ್ಟರೂ ನಂತರದ ದಿನಗಳಲ್ಲಿ ಇತರ ಕ್ಷೇತ್ರಗಳ ದುಸ್ಥಿತಿಗೆ ಕಾರಣವಾಗಿ, ಪಂಚವಾರ್ಷಿಕ ಯೋಜನೆಗಳ ಮಿತಿಗಳನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯ ಮಾಡಿಕೊಟ್ಟ ಎರಡನೇ ಪಂಚವಾರ್ಷಿಕ ಯೋಜನೆ(1956-61). 1991ರ ಭಾರತದ ಆರ್ಥಿಕತೆಯ ಉದಾರೀಕರಣದ ಕಾರಣದಿಂದ ಸರಕಾರಿ ಸ್ವಾಮ್ಯದ ಕೇಂದ್ರೀಕೃತ ಯೋಜನೆಗಳ ಹಿಡಿತ ಕೈತಪ್ಪಿಹೋಗಿತ್ತು. ಕನಿಷ್ಟ ಆಗಲಾದರೂ ಯೋಜನಾ ಕೇಂದ್ರಿತ ಆರ್ಥಿಕತೆಯನ್ನು ನಿಧಾನವಾಗಿ ಬದಲಾಯಿಸಬೇಕಿತ್ತು. ಆ ಮೊದಲು ಜಾರಿಯಲ್ಲಿದ್ದ ಸಮಾಜಿಕ-ಆರ್ಥಿಕ ಯೋಜನೆಗಳ ಸ್ವರೂಪ ಖಾಸಗೀ ವಲಯದ ಪಾಲ್ಗೊಳ್ಳುವಿಕೆಯಿಂದ ಎಂಟನೇ ಪಂಚವಾರ್ಷಿಕ ಯೋಜನೆಯನ್ನು "ಸೂಚಿಸುವ ಯೋಜನೆ"ಯಾಗಿ (ಇಂಡಿಕೇಟಿವ್ ಪ್ಲಾನಿಂಗ್ 1992-97) ಪರಿವರ್ತಿಸಲಾಯಿತು. ಆ ಹೊತ್ತಿಗೆ ದುರ್ಬಲವಾಗತೊಡಗಿದ್ದ ಪಂಚವಾರ್ಷಿಕ ಯೋಜನೆ ಈ ಸರಕಾರದ ದಿಟ್ಟ ಕ್ರಮದಿಂದ ಕೊನೆಗೊಂಡಿದೆ. "ಮೈಕ್ರೋ ಕ್ಯಾಬಿನೆಟ್"ನಂತೆ ಕಾರ್ಯನಿರ್ವಹಿಸುತ್ತಾ "ಯೋಜನೆಯ ರಾಜಕಾರಣ" ಮಾಡುತ್ತಿದ್ದ ಯೋಜನಾ ಆಯೋಗದ ಬರ್ಖಾಸ್ತುಗೊಳಿಸುವಿಕೆ ಪಂಚವಾರ್ಷಿಕ ಯೋಜನೆಗಳಿಗೆ ಇತಿಶ್ರೀ ಹಾಡುವ ಮುನ್ಸೂಚನೆಯಾಗಿತ್ತು. ಪ್ಲಾನ್-ನಾನ್ ಪ್ಲಾನ್ ಎಂಬ ಅವೈಜ್ಞಾನಿಕ ಹಂಚಿಕೆಯ ಕ್ರಮದ ಕುರಿತಾಗಿ ಡಾ.ಸಿ.ರಂಗರಾಜನ್ ಸಮಿತಿಯ ಶಿಫಾರಸ್ಸಿನಂತೆ ಈ ಸಾಲಿನಿಂದ ಆದಾಯ ಮತ್ತು ಬಂಡವಾಳ ಎಂಬ (ರೆವೆನ್ಯೂ ಹಾಗೂ ಕ್ಯಾಪಿಟಲ್) ವರ್ಗೀಕರಣವನ್ನು ಮಾಡಲಾಗುತ್ತದೆ. ಇದು ಸರಕಾರಕ್ಕೆ ಕಾಲಕಾಲಕ್ಕೆ ದೇಶಕ್ಕೆ ಹಾಗೂ ರಾಜ್ಯಗಳಿಗೆ ಸೂಕ್ತ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಈ ನಡೆಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ಸಮರ್ಪಕ ಸಮನ್ವಯತೆ ರೂಪುಗೊಳ್ಳಬೇಕಿದೆ. ಇದರಲ್ಲಿ ನೀತಿ ಆಯೋಗದ ಕಾರ್ಯ ಮಹತ್ವಪೂರ್ಣವಾಗಿರಲಿದೆ.

ಇನ್ನೊಂದು ಮುಖ್ಯ ಮೊದಲಿಗೆ ಈ ಬಾರಿಯ ಬಜೆಟ್ ನಾಂದಿಹಾಡಲಿದೆ. ಅಪಾರವಾಗಿ ಬೆಳೆಯುತ್ತ ಸಾಗಿದ್ದ ದೇಶದ ಆರ್ಥಿಕತೆಗೆ ಮಾರಕವಾಗಿರುವ ಎರಡು ಅವಳಿ ಕೊರತೆಗಳಾದ
ವಿತ್ತೀಯ ಕೊರತೆ ಹಾಗೂ ಆದಾಯ ಕೊರತೆಗಳನ್ನು (ಫಿಸ್ಕಲ್ ಹಾಗೂ ರೆವೆನ್ಯೂ ಡೆಫಿಸಿಟ್) ಕಡಿವಾಣಕ್ಕೆ ತರಲು 'ಫಿಸ್ಕಲ್ ರೆಸ್ಪಾಸ್ಸಿಬಲಿಟಿ ಮತ್ತು ಬಜೆಟ್ ಮ್ಯಾನೆಜ್‍ಮೆಂಟ್ ಕಾಯ್ದೆ 2003(ಎಫ್.ಆರ್.ಬಿ.ಎಂ.) ಜಾರಿಗೊಳಿಸಲಾಗಿತ್ತು. ಹಣದುಬ್ಬರ, ಬೆಳವಣಿಗೆಯ ಕುಂಠಿತತೆ ಹಾಗೂ ಇನ್ನಿತರ ಕಾರಣಗಳಿಂದ ಆ ಕೊರತೆಗಳನ್ನು ಸಂಪೂರ್ಣವಾಗಿ ಕಡಿವಾಣಕ್ಕೆ ತರಲು ಸಾಧ್ಯವಾಗಿಲ್ಲ. ಆದಾಯ ಕೊರತೆಯನ್ನು ಅಗತ್ಯವಾಗಿ ಸೊನ್ನೆಗೆ ಇಳಿಸಬೇಕು ಆದರೆ ವಿತ್ತೀಯ ಕೊರತೆ ಹೂಡಿಕೆಗೆ ಪೂರಕವಾಗಿರುತ್ತದೆ. ಯಾಕೆಂದರೆ ದೇಶದೊಳಗೆ ಬಂಡವಾಳ ಹರಿದು ಬರದ ಸಂದರ್ಭದಲ್ಲಿ ಸರಕಾರ ಸಾಲಮಾಡಿ ಹೂಡಿಕೆಗೆ ಪೂರಕವಾದ ಸೌಕರ್ಯಗಳನ್ನು ನಿರ್ಮಿಸಬೇಕಾಗುತ್ತದೆ. ಆದ್ದರಿಂದ ಕಳೆದ ಬಜೆಟ್‍ನಲ್ಲಿ ಘೋಷಿಸಿದಂತೆ ಈ ಬಾರಿಯಿಂದ ವಿತ್ತೀಯ ಹಾಗೂ ಆದಾಯ ಕೊರತೆಯ ಗುರಿಯನ್ನು ತಲುಪಲು ನಿರ್ದಿಷ್ಟ ಸಂಖ್ಯೆಯ ಬದಲು ವಾರ್ಷಿಕವಾಗಿ ಅಥವಾ ಕಿರು ಅವಧಿಯಲ್ಲಿ ಸಾಧಿಸಬಹುದಾದ ಶ್ರೇಣಿಯನ್ನು ರೂಪಿಸಲಾಗುವುದು. ದೇಶದ ಬೆಳವಣಿಗೆಯ ಅನಿವಾರ್ಯತೆಗೆ ತಕ್ಕಂತೆ ಈ ಗುರಿಯನ್ನು ತಲುಪುವುದು ಇದರ ಉದ್ದೇಶ. ಇದು ಅತ್ಯಂತ ಸಮರ್ಪಕ ಕೂಡ ಯಾಕೆಂದರೆ ಎಫ್.ಆರ್.ಬಿ.ಎಂ ಕಾಯ್ದೆ ಜಾರಿಯಾದ ನಾಲ್ಕು ವರ್ಷಗಳಲ್ಲಿ ಅಂದರೆ 2007ರ ಹೊತ್ತಿಗೆ ವಿತ್ತೀಯ ಹಾಗೂ ಆದಾಯ ಕೊರತೆಯನ್ನು ಸರಕಾರ ನೀಗಬೇಕಿತ್ತ. ಆದರೆ ಅದು ಇಂದಿಗೂ ಸಾಧ್ಯವಾಗಿಲ್ಲ. ಶ್ರೇಣಿಕೃತ ಗುರಿಯಿದ್ದಾಗ ಸರಕಾರಕ್ಕೂ ಗುರಿಮುಟ್ಟುವುದಕ್ಕೆ ನಮ್ಯತೆಯಿರುತ್ತದೆ. ಹಾಗೆಯೇ ಅನಿವಾರ್ಯ ಸಂದರ್ಭಗಳಲ್ಲಿ ಶ್ರೇಣಿಯ ಮಿತಿಯೊಳಗೆ ಸಮರ್ಪಕ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇದರ ಮುಂದುವರೆದ ಭಾಗವಾಗಿ ಜರ್ಮನಿ ಹಾಗೂ ಚಿಲಿ ದೇಶಗಳಲ್ಲಿ ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿರುವಂತೆ ಆ ಕಾಯ್ದೆಯ ತಿದ್ದುಪಡಿಯ ಮೂಲಕ ಸರಕಾರಗಳು ಮಾಡಬಹುದಾದ ಅಪರಿಮಿತ ಸಾಲದ ಪ್ರಮಾಣಕ್ಕೆ ಕಡಿವಾಣಬೀಳಲಿದೆ. ಭವಿಷ್ಯದ ದೃಷ್ಟಿಯಿಂದ ಇದೊಂದು ಅತ್ಯಂತ ದಿಟ್ಟ ಕ್ರಮವಾಗಿರಲಿದೆ.


***

ಆಂತರಿಕ ಹಾಗೂ ಬಾಹ್ಯ ಸವಾಲುಗಳು:

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಇದು ನಾಲ್ಕನೇ ಬಜೆಟ್. ನರೇಂದ್ರ ಮೋದಿಯವರ ಉತ್ತಮ ಆಡಳಿತಾವಧಿಯ ಮಧ್ಯಾವಸ್ಥೆಯಲ್ಲಿ ಬಜೆಟ್ ಮಂಡಿಸುವ ಕಾರ್ಯ ಕತ್ತಿಯಂಚಿನ ನಡಿಗೆ. ಒಂದೆಡೆ ಮುಂದುವರೆಯುತ್ತಿರುವ ವಿಶ್ವ ಮಾರುಕಟ್ಟೆಯ ಪ್ರಕ್ಷುಬ್ದತೆ, ದೇಶಿಯ ಮಾರುಕಟ್ಟೆಯ ಮಂದ ನಡಿಗೆ, ಇಳಿಯುತ್ತಿರುವ ಬೇಡಿಕೆ, ಕುಂಠಿತಗೊಳ್ಳುತ್ತಿರುವ ಬೆಳವಣಿಗೆ, ಬೆಳವಣಿಗೆಯ ಪುನರುಜ್ಜೀವನದತ್ತ ಮುಖ ಮಾಡಿದರೆ ಏರಬಹುದಾದ ಹಣದುಬ್ಬರ, ದಿನದಿಂದ ದಿನಕ್ಕೆ ಏರುತ್ತಿರುವ 'ನಾನ್ ಫರ್ಫಾಂಮಿಂಗ್ ಅಸೆಟ್(ಕ್ರಿಯಾಶೀಲವಲ್ಲದ ಆಸ್ತಿ)', ಮೇಲೇಳದ ಕೃಷಿ ವಲಯ, ವಿಮುದ್ರಿಕರಣದ ತ್ವರಿತ ಪರಿಣಾಮದಿಂದ ಚೇತರಿಸಿಕೊಳ್ಳದ ಕೈಗಾರಿಕಾ ವಲಯ ಹೀಗೆ ಹತ್ತು ಹಲವು ಸವಾಲುಗಳಿಗೆ ಇಂದಿನ ಬಜೆಟ್ ಉತ್ತರವಾಗಬೇಕಿದೆ. ಇವೇ ಮೊದಲಾದ ಕಾರಣಗಳಿಂದ ಹಿಂದಿನ ಮೂರು ಬಜೆಟ್‍ಗಳಲ್ಲಿದ್ದ ಆರ್ಥಿಕ ಸ್ವಾತಂತ್ರ್ಯ, ಸುಭದ್ರತೆ ಹಾಗೂ ಸ್ಥಿರತೆ ಈ ಬಾರಿ ವಿತ್ತ ಸಚಿವರಿಗಿಲ್ಲ. ಬಜೆಟ್‍ನಲ್ಲಿ ಪ್ರಧಾನವಾಗಿ ಶಿಕ್ಷಣ, ಕೌಶಲ, ಉದ್ಯೋಗ, ಹೂಡಿಕೆ ಹಾಗೂ ಕೃಷಿ, ಉತ್ಪಾದನಾ ಹಾಗೂ ಸೇವಾವಲಯವನ್ನು ಪುನಶ್ಚೇತನಗೊಳಿಸುವ ಹೊಣೆಗಾರಿಕೆಯಿದೆ.

ದೇಶಬಾಂಧವರ ಅಪಾರ ನಿರೀಕ್ಷೆಗಳು, ಮೋದಿ ಸರಕಾರದ ಮಹತ್ವಾಕಾಂಕ್ಷೆ, ಪ್ರಸ್ತುತ ಮಂದಗತಿಯಲ್ಲಿ ಸಾಗುತ್ತಿರುವ ಬೆಳವಣಿಗೆ, ಭಾರತಕ್ಕೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡಬೇಕಾದ ದೂರದೃಷ್ಟಿ, ಹಿಂದಿನ ಸಾಲಿನಲ್ಲಿ ವಿಶೇಷ ಪ್ರಾಧಾನ್ಯ ನೀಡಿದ ಅರ್ಥ ವ್ಯವಸ್ಥೆಯ ಒಂಭತ್ತು ಆಧಾರ ಸ್ತಂಭಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯಬೇಕಾದ ಸಮಚಿತ್ತತೆ. ಕಳೆದ ಮೂರು ವರ್ಷಗಳಲ್ಲಿ ಸಮಾಜ ಕಲ್ಯಾಣ ಯೋಜನೆಗಳಿಗೆ ಕುಂಠಿತಗೊಳ್ಳುತ್ತಿರುವ ಹಣಕಾಸನ್ನು ಮತ್ತೆ ಇಮ್ಮಡಿಗೊಳಿಸುವ ಅನಿವಾರ್ಯತೆ. ವಿಮುದ್ರಿಕರಣ ಯೋಜನೆ ಹಾಗೂ ಆದಾಯ ಘೋಷಣೆ ಯೋಜನೆಯ ಮುಖೇನ ಸರಕಾರದ ಬೊಕ್ಕಸಕ್ಕೆ ಸೇರಿರುವ ಹೆಚ್ಚುವರಿ ಆದಾಯವನ್ನು ಸಮರ್ಥವಾಗಿ ಬಳಸಬೇಕಾದ ಒತ್ತಡ. ದೇಶದ 'ಪರೋಕ್ಷ ತೆರಿಗೆ' ಪದ್ಧತಿಗೆ ಹೊಸ ಸ್ವರೂಪ ನೀಡಬಲ್ಲ ಕ್ರಾಂತಿಕಾರಿ ಜಿ.ಎಸ್.ಟಿ.(ಗೂಡ್ಸ್ ಮತ್ತು ಸರ್ವಿಸಸ್ ತೆರಿಗೆ)ಯ ಜಾರಿ ಜುಲೈ ತಿಂಗಳವರೆಗೆ ಸಾಧ್ಯವಿಲ್ಲ. ಅಂದರೆ ಅದು ಸರಕಾರದ ಬೊಕ್ಕಸಕ್ಕೆ ಹಾಗೂ ತೆರಿಗೆ ಸುಧಾರಣೆಗೆ ದೊಡ್ಡ ಹಿಂದೇಟು. ಇದನ್ನು ಏರಿಕೆಯಾಗುತ್ತಿರುವ ಸೇವಾ ತೆರಿಗೆಯನ್ನು ಮುಟ್ಟದೆ(?) 'ಪರೋಕ್ಷ ತೆರಿಗೆ'ಯನ್ನು ಹೆಚ್ಚಿಸಬೇಕಾದ ಹಾಗೂ ವಿಸ್ತರಿಸಬೇಕಾದ ಸಂದರ್ಭವಿದು. 

2016ರ ಎಕಾನಾಮಿಕ್ ಸರ್ವೆ ಗುರುತಿಸಿರುವಂತೆ ದೇಶದ ಆದಾಯ ತೆರಿಗೆಯನ್ನು ಕಟ್ಟುವವರು ಕೇವಲ 2% ಜನರು ಮಾತ್ರ. 2015-16ನೇ ಸಾಲಿನಲ್ಲಿ ಕೇವಲ 2 ಕೋಟಿ ಜನರು ಮಾತ್ರ ತೆರಿಗೆ ಕಟ್ಟಿದ್ದಾರೆ. ಭಾರತದ ತೆರಿಗೆ-ಜಿ.ಡಿ.ಪಿ.ಯ ಸರಾಸರಿ 16.6%. ಇದು ಇತರ ಅಭಿವೃದ್ಧಿಹೊಂದುತ್ತಿರುವ ದೇಶಗಳಿಗೆ(21%) ಹೋಲಿಸಿದರೆ ಅತ್ಯಂತ ಕಡಿಮೆ. ಆದ್ದರಿಂದ ಈ ಬಾರಿ ಶ್ರೀಮಂತರು ಹಾಗೂ ಅತೀ ಶ್ರೀಮಂತರಿಗಾಗಿ ಒಂದೆರಡು ಹೊಸ ತೆರಿಗೆಯನ್ನು ಜಾರಿಗೆ ತಂದರೆ ಯಾವುದೇ ಅಚ್ಚರಿಯಿಲ್ಲ. ಕಾರ್ಪೊರೆಟ್ ತೆರಿಗೆಯ ನಂತರ ಅತೀ ಹೆಚ್ಚು ಆದಾಯ ಬರುವುದು ಆದಾಯ ತೆರಿಗೆಯಿಂದ ಹಾಗಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆದಾಯ ತೆರಿಗೆ ಸಂಗ್ರಹಣೆ ಈ ಬಜೆಟ್‍ನ ಗುರಿಯೂ ಹೌದು. ಇದೇ ಸಂದರ್ಭದಲ್ಲಿ ಸರಕಾರ ಆದಾಯ ತೆರಿಗೆಯ ತಳವನ್ನು ಎರಡೂವರೆ ಲಕ್ಷದಿಂದ ಮೂರು ಲಕ್ಷಕ್ಕೆ ಏರಿಸಬಹುದಾದ ಸಾಂಭವ್ಯತೆ ಎದುರಾಗಿದೆ. ಕಾರ್ಪೊರೇಟ್ ತೆರಿಗೆಯನ್ನು ಈಗಾಗಲೇ ಘೋಷಿಸಿರುವಂತೆ ಮುಂದಿನ ಎರಡು ವರ್ಷಗಳಲ್ಲಿ 25%ಗೆ ಇಳಿಸಬೇಕಾಗಿದೆ. ಇದರಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮುಂದೆ ಸ್ಪರ್ಧಾತ್ಮಕವಾದ ತೆರಿಗೆಯನ್ನು ರೂಪಿಸಿ ಸ್ಥಿರ ತೆರಿಗೆಯ ಅಡಿಪಾಯದ ಮೂಲಕ "ತೆರಿಗೆ ಭಯೋತ್ಪಾದನೆ" ಎಂಬ ಹಣೆಪಟ್ಟಿಯಿಂದ ಕಳಚಿಕೊಂಡು, ಕಾರ್ಪೊರೆಟ್ ನಂಬಿಕೆಯನ್ನು ವೃದ್ಧಿಸಿಕೊಳ್ಳಬೇಕಾದ ಆ ಮೂಲಕ ಹೂಡಿಕೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲೇಬೇಕಾಗಿದೆ.

ಹೈವೇಯಿಂದ "ಐ"ವೇ ವರೆಗೆ, ಭಾರತ್ ಮಾಲಾದಿಂದ ಸಾಗರ್‍ಮಾಲಾ ವರೆಗೆ, ಬಂದರಿನಿಂದ ವಿಮಾನ ನಿಲ್ದಾಣಗಳವರೆಗೆ, ಭೂವಿಜ್ಞಾನದಿಂದ ಬಾಹ್ಯಾಕಾಶದವರೆಗೆ, ಶ್ರಮೇವ ಜಯತೆಯಿಂದ ಕೌಶಲಭಿವೃದ್ಧಿಯವರೆಗೆ.. ಹೀಗೆ ಮೂಲಭೂತ ಸೌಕಾರ್ಯಾಭಿವೃದ್ಧಿಗೆ ಕಳೆದ ಮೂರು ವರ್ಷಗಳಿಂದ ತನ್ನ ಮಿತಿಯಲ್ಲಿಯೇ ಅಗತ್ಯ ಹೂಡಿಕೆಯನ್ನು ಮಾಡುತ್ತಿರುವ ಸರಕಾರಕ್ಕೆ ವಿದೇಶಿ ಬಂಡವಾಳ ಹೂಡಿಕೆ ಮತ್ತು ಖಾಸಗಿ ವಲಯದ ನೀರಸ ಹೂಡಿಕೆಯ ಪುನಚ್ಛೇತನಕ್ಕಾಗಿ ಸಾಕಷ್ಟು ಸಾಲ ಮಾಡಬೇಕಾದ ಅನಿವಾರ್ಯತೆಯಲ್ಲಿದೆ. ಈ ಬಾರಿ ಸಾಲ ಮಾಡಿ ತುಪ್ಪ ತಿನ್ನು ಎನ್ನುವುದಕ್ಕೆ ತದ್ವಿರುದ್ಧವಾಗಿ ಸಾಲವನ್ನು ಸೇವನೆಗೆ ಬಳಸದೆ ಹೂಡಿಕೆಗೆ ಬಳಸುವುದು ಬಹುತೇಕ ಅಗತ್ಯ. ಅದು ಜಾಣ್ಮೆಯ ನಡೆಯೂ ಹೌದು. ಅದನ್ನೇ ಕಳೆದೆರಡು ಎಕನಾಮಿಕ್ ಸರ್ವೆಗಳು ಪುನರುಚ್ಛರಿಸಿವೆ. ಹೂಡಿಕೆಯ ಪ್ರಗತಿ ಕಾಣದ ಈ ಹೊತ್ತಿನಲ್ಲಿ ಆರೋಗ್ಯ, ಶಿಕ್ಷಣ ಇಂತಹ ಅನಿವಾರ್ಯ ಸಾಮಾಜಿಕ ಸುಧಾರಣೆಯ ಯೋಜನೆಗಳಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವಕ್ಕೆ ಮೊರೆ ಹೋಗಬೇಕಾದ್ದು ಅನಿವಾರ್ಯವಾಗಬಹುದು. ಮುಂದಿನನ ದಿನಗಳಲ್ಲಿ ಸರಕಾರ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬಹುದು.

ಸರಕಾರ ಹೂಡಿಕೆಗಾಗಿ ಏನೇ ಕಸರತ್ತು ಮಾಡುವ ಪ್ರಯತ್ನದಲ್ಲಿದ್ದರೂ ಅಗತ್ಯ ಹೂಡಿಕೆಗೆ ಸಾಲವನ್ನು ಒದಗಿಸಲಾಗದೆ ಅಸಹಾಯಕವಾಗಿ ಕುಳಿತಿರುವ ಬ್ಯಾಂಕ್‍ಗಳು, ಇದರಿಂದ ಮುಕ್ತಿ ಪಡೆಯುವುದಕ್ಕೆ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯಿಂದ ಮಾತ್ರ ಸಾಧ್ಯ. ಅದನ್ನು ಆದಷ್ಟು ಬೇಗ ಜಾರಿಗೆ ತರದಿದ್ದಲ್ಲಿ ಈ ನಿಸ್ಸಾಹಯಕ ಬ್ಯಾಂಕ್‍ಗಳಿಂದ ಆರ್ಥಿಕ ಹಿಂಜರಿತಕ್ಕೆ ಪೂರಕ ಕಾರಣವಾಗಬಹುದು. ಇದು ಹೀಗೇ ಮುಂದುವರೆದರೆ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಏರಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕುತ್ತದೆ, ಆಗ ಕಿರು ಅವಧಿಯಲ್ಲಿ ಹೂಡಿಕೆ ಮತ್ತು ಜನಸಾಮಾನ್ಯರ ಅನಿವಾರ್ಯತೆಗಳು ಮರೀಚಿಕೆಯಾಗಬಹುದು.

ಅಮೆರಿಕದ ಹೊಸ ಸರಕಾರದ ನೀತಿಗನುಗುಣವಾಗಿ ಅಲ್ಲಿನ ಕಾಂಗ್ರೆಸ್ ಮಂಡಿಸಿರುವ ಹೆಚ್1ಬಿ ವೀಸಾ ನಿಯಮ ಜಾರಿಯಾದರೆ ಅಮೆರಿಕಕ್ಕೆ ಉದ್ಯೋಗ ಅರಸಿ ತೆರಳಿರುವ ಐಟಿ ಉದ್ಯೋಗಿಗಳು ಅತಂತ್ರರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ಮರಳಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಭಾರತದೊಳಗೆ ಅವರಿಗೆಲ್ಲ ನೀಡಲು ಉದ್ಯೋಗದ ಸೃಷ್ಟಿಯಾಗಬೇಕಾಗುತ್ತದೆ. ಈಗಾಗಲೇ ದೇಶದೊಳಗೆ ಇರುವ ನಿರುದ್ಯೋಗದ ಸಮಸ್ಯೆ ಮತ್ತೊಂದೆಡೆ. ಈ ಬೃಹತ್ ಸವಾಲವನ್ನು ಅವಕಾಶವನ್ನಾಗಿ ಬದಲಾಯಿಸಬೇಕಾದ ಅನಿವಾರ್ಯತೆ ಈ ಬಾರಿಯ ಬಜೆಟ್‍ಗಿದೆ. ಭಾರತವನ್ನು ಐಟಿ, ಬಿಟಿ. ತಂತ್ರಜ್ಞಾನ, ಹೀಗೆ ಒಟ್ಟಂದದಲ್ಲಿ ಸೇವಾವಲಯದ ಕೇಂದ್ರವಾಗಿ ರೂಪಿಸಬೇಕಾದ ಮಹತ್ತರ ಜವಾಬ್ದಾರಿ ಬಜೆಟ್ ಮುಂದಿದೆ. ಕೃಷಿಯ ಆಮೆಗತಿ, ಮೇಕ್ ಇನ್ ಇಂಡಿಯಾ ಇನ್ನೂ ಮೇಕಿಂಗ್ ಹಂತದಲ್ಲಿದೆ. ಅದೇ ಹೊತ್ತಿಗೆ ದೇಶದ ಶೇಕಡ 15% ಜನರು ಉದ್ಯೋಗ ಮಾಡುವ ಆದರೆ ಜಿ.ಡಿ.ಪಿ.ಗೆ ಶೇಕಡ 50% ಆದಾಯವನ್ನು ಒದಗಿಸುತ್ತಿರುವ ಸೇವಾವಲಯವೂ ಕಳೆದ ಕೆಲವು ತಿಂಗಳುಗಳಿಂದ ಅತಂತ್ರವಾಗಿ ತೋರುತ್ತಿದೆ.

ಈಗೀಗ ಪ್ರಗತಿ ಕಾಣದೇ ಮುಳುಗುತ್ತಿರುವ ಜಡ ವಿಶ್ವದಲ್ಲಿ ಉಜ್ವಲಮಯ ಕಿಡಿಯಂತೆ ಗೋಚರಿಸುತ್ತಿದ್ದ ಭಾರತದ ಆರ್ಥಿಕತೆಯಲ್ಲಿ ಸಣ್ಣ ಅತಂತ್ರತೆ, ಸ್ವಲ್ಪ ಎಚ್ಚರ ತಪ್ಪಿದರೂ ದೇಶವನ್ನು ಹಿನ್ನಡೆಗೆ ಕೊಂಡೊಯ್ದು ಬೆಳವಣೆಗೆಯನ್ನು ಮುಳುಗಿಸಬಲ್ಲ ಅಲೆಗಳು ಗೋಚರಿಸತೊಡಗಿವೆ. ಐ.ಎಂ.ಎಫ್.(ಇಂಟರ್ ನ್ಯಾಷನಲ್ ಮಾನೆಟರಿ ಫಂಡ್)ನ ಅಂದಾಜಿನ ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ ದೇಶದ ಜಿ.ಡಿ.ಪಿ.ಯ 6.6%ಕ್ಕೆ ಇಳಿಯಲಿದೆ. ಸರಕಾರದ ಅಂಕಿ ಅಂಶಗಳ ಪ್ರಕಾರ 2017-18ರಲ್ಲಿ ಹಿಂದೆ ಊಹಿಸಿದ್ದಕ್ಕಿಂತ ಕಡಿಮೆ ಅಂದರೆ ಆರ್ಥಿಕ ಬೆಳವಣಿಗೆ ಜಿಡಿಪಿಯ 7.1% ಇಳಿಯಲಿದೆ. ಸೆಂಟ್ರಲ್ ಸ್ಟಾಟಸ್ಟಿಕಲ್ ಆಫಿಸ್(ಸಿ.ಎಸ್.ಒ.)ನ ಈ ಅಧ್ಯಯನದ ದಾಖಲೆಯಲ್ಲಿ ದೇಶದ ಶೆಕಡ 86% ನಗದಿನ ವಿಮುದ್ರಿಕರಣದಿಂದುಟಾದ ಪರಿಣಾಮಗಳು ಸೇರಿಲ್ಲ. ಈ ಭೀತಿ ಒಂದೆಡೆಯಾದರೆ ಜಿ.ಡಿ.ಪಿ. ಲೆಕ್ಕಾಚಾರ ವಾಸ್ತವದಿಂದ ದೂರವಿರುವ ಅತಿಯಾದ ಸಂಖ್ಯಾಪ್ರಮಾಣ. ಹಾಗಾಗಿ ವಾಸ್ತವದಲ್ಲಿ ಬೆಳವಣಿಗೆಯ ನೈಜಸ್ಥಿತಿ ಇದಕ್ಕಿಂತ ಇಳಿಮುಖವಾಗಿರಲಿದೆ. ಇದು ಭಾರತ ಹೆಚ್ಚು ಆತಂಕಗೊಳ್ಳಬೇಕಾದ ಮತ್ತು ಎಚ್ಚೆತ್ತುಕೊಳ್ಳಬೇಕಾದ ಸಂಗತಿ ಹಾಗೂ ಸಮಯ. ಆಂತರಿಕ ಹಾಗೂ ಬಾಹ್ಯವಾಗಿ ಆರ್ಥಿಕ ಪರಿಸ್ಥಿತಿ ಈ ಬಾರಿಯ ಬಜೆಟ್‍ನ ಸಮಯಕ್ಕೂ ಯು.ಪಿ.ಎ. ಸರಕಾರದ ಕೊನೆಯ ದಿನಗಳ ಪರಿಸ್ಥಿತಿಗೂ ಸಾಕಷ್ಟು ಸಾಮ್ಯತೆಯಿದೆ.

ಜಾಗತಿಕ ತೈಲ ಬೆಲೆ ಬ್ಯಾರಲ್‍ಗೆ 70 ಡಾಲರ್‍ಗೆ ಏರಿದೆ. ಇದು ಕಳೆದ ಎರಡು ವರ್ಷಗಳ ಪರಿಸ್ಥಿತಿಗೆ ಹೋಲಿಸಿದರೆ ತುಸು ಹೆಚ್ಚೆಂದೇ ಹೇಳಬೇಕು. ಜಾಗತಿಕವಾಗಿ ಆಹಾರ ಪದಾರ್ಥಗಳು, ಸರಕು, ಉಪಭೋಗ್ಯ ವಸ್ತುಗಳ ಬೆಲೆ ಇಳಿಮುಖವಾಗಿಯೇ ಸಾಗಿದೆ. ಹಾಗಿದ್ದೂ ಭಾರತ ಹಾಗೂ ಜಾಗತಿಕ ಬೇಡಿಕೆ ದುರ್ಬಲವಾಗಿದೆ. ಹಾಗಾಗಿ ಇವ್ಯಾವುವೂ ಭಾರತದ ಪಾಲಿಗೆ ವರದಾನವಾಗಿ ಪರಿಣಮಿಸುತ್ತಿಲ್ಲ. ಶುದ್ಧ ಹಾಗೂ ಮರುಬಳಸಬಹುದಾದ ಸೌರಶಕ್ತಿ, ಗಾಳಿ, ಶೇಲ್ ಗ್ಯಾಸ್, ಮಿಥೇನ್ ಮೊದಲಾದ ಸಂಪನ್ಮೂಲಗಳ ಮೇಲಿನ ಹೂಡಿಕೆಯನ್ನು ಸರಕಾರ ಯಾವುದೇ ಕಾರಣಕ್ಕೂ ಕಡಿತಗೊಳಿಸುವಂತಿಲ್ಲ. ಯಾಕೆಂದರೆ ಭಾರತ ಮಾತ್ರವಲ್ಲ ಮನುಷ್ಯಕುಲಕ್ಕೆ ಈ ಮೂಲಗಳೇ ಭವಿಷ್ಯ. ಇನ್ನು ಭಾರತ ಉನ್ನತ ಶಿಕ್ಷಣ, ಅನ್ವೇಷಣೆ, ಮೂಲ ವಿಜ್ಞಾನ, ತಂತ್ರಜ್ಞಾನ ಹಾಗೂ ಬಹ್ಯಾಕಾಶ ಕ್ಷೇತ್ರದಲ್ಲೂ ನಿಗದಿತ ಪ್ರಮಾಣದ ಪಾಲನ್ನು ಈ ಬಾರಿ ನೀಡಲಿದೆ. ಮುಂದಿನ ದಿನಗಳಲ್ಲಿ ವಿಶ್ವವನ್ನು ಮುನ್ನಡೆಸಲಿರುವುದು ಈ ಜ್ಞಾನಶಕ್ತಿಗಳು. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನವಲ್ಲದಿದ್ದರೂ ಹಿಂದಿನ ಬಜೆಟ್‍ಗಳಿಗಿಂತ ಹೆಚ್ಚಿನ ಅನುದಾನದ ಅಗತ್ಯವಿದೆ. ಹಾಗಾಗಿ ಈ ಕ್ಷೇತ್ರಗಳೂ ಜೇಟ್ಲಿಯವರಿಗೆ ಮುಖ್ಯವಾಗಿರಲಿವೆ.

ನರೇಂದ್ರ ಮೋದಿ ಸರಕಾರದ ಬೆಳವಣೆಗೆಯ ಮಾರ್ಗಸೂಚಿ ಎರಡು ನಂಬಿಕೆಗಳಲ್ಲಿ ದೃಢವಾಗಿ ನೆಲೆಯೂರಿದೆ. ಮೊದಲನೆಯದು ವಿಶ್ವದ ಅತಂತ್ರತೆಯ ಎದುರು ಬಂಡವಾಳ ಹೂಡಿಕೆಗೆ ಭಾರತ ಸರ್ವಸಮರ್ಥ ದೇಶ. ಸರಕಾರ ಕೇವಲ ಹೂಡಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಿದರೆ ಸಾಕು ಬಂಡವಾಳ ತಾನೇ ತಾನಾಗಿ ಹರಿದುಬರುತ್ತದೆ. ಎರಡನೆಯದಾಗಿ, ಮೂಲಭೂತ ಸೌಕರ್ಯಗಳಲ್ಲಿ ಅಪಾರವಾಗಿ ಹೂಡಿಕೆಮಾಡುವುದರಿಂದ ಖಾಸಗಿ ಹೂಡಿಕೆದಾರರು ಭಾರತವನ್ನು ಬಿಟ್ಟು ಮತ್ತೆಲ್ಲಿಗೂ ಹೋಗುವುದಿಲ್ಲ. ಕಳೆದ ಮೂರು ಬಜೆಟ್‍ನ ಸಿಂಹಾವಲೋಕನ ಮಾಡಿದಾಗ ಈ ಮಾತು ಸ್ಪಷ್ಟವಾಗುತ್ತದೆ. ಆದರೆ ಅಂದುಕೊಂಡದ್ದರಲ್ಲಿ 25% ಕೂಡ ಹೂಡಿಕೆಯಾಗುತ್ತಿಲ್ಲ ಎಂಬ ಸತ್ಯ ಜೇಟ್ಲಿಯವರಿಗೆ ಮನವರಿಕೆಯಾಗಿದೆ. ಆದರೆ ಹಿಡಿದ ಈ ಹಾದಿಯನ್ನು ಬಿಡುವಂತಿಲ್ಲ. ಅದೇ ಹೊತ್ತಿಗೆ ವಿಮುದ್ರಿಕರಣದಿಂದ ಜನರಿಗಾದ ತೊಂದರೆಯನ್ನು ಸರಿದೂಗಿಸಲು ಹಾಗೂ ಬಂದ ಹೆಚ್ಚುವರಿ ಆದಾಯವನ್ನು ಸರಿಯಾಗಿ ಬಳಸಿಕೊಳ್ಳಲು ಬಜೆಟ್‍ನಲ್ಲಿ ಹಣವನ್ನು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸುವುದಕ್ಕಾಗಿ ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಬಳಸಬೇಕೆಂಬುದೂ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ. ಹೂಡಿಕೆ ಅಥವಾ ಹಂಚುವಿಕೆಯ ದ್ವಂದ್ವ ಈ ಬಜೆಟ್‍ನಲ್ಲಿ ಅನುರಣಿಸಲಿದೆ.

ಕಳೆದ ಮೂರು ವರ್ಷಗಳಲ್ಲಿ ಅರುಣ್ ಜೇಟ್ಲಿ ಭಾರತಕ್ಕೊಂದು ಸ್ಪಷ್ಟ ಹಾಗೂ ಭದ್ರ ಆರ್ಥಿಕ ದಿಕ್ಸೂಚಿಯನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಪೆಟ್ರೋಲಿಯಂನಂತಹ ಕಡು ಬಡವರಿಗೆ ಉಪಯೋಗವಾಗದ ವಸ್ತುಗಳ ಮೇಲಿನ ಜಡ ಸಬ್ಸಿಡಿಗಳನ್ನು ಕಡಿತಗೊಳಿಸಿದ್ದು. ಜನ್‍ಧನ್-ಆಧಾರ್-ಮೊಬೈಲ್ ತಂತ್ರಜ್ಞಾನವನ್ನು ಬಳಸಿಕೊಂಡು ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆಯಂತಹ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆತರುತ್ತಿರುವುದು. ಉದ್ಯೋಗ ಖಾತ್ರಿ, ರಸಗೊಬ್ಬರ ಇತ್ಯಾದಿ ಯೋಜನೆಗಳಲ್ಲಿ ನೇರ ಹಣ ವರ್ಗಾವಣೆಯ ಕಾರಣದಿಂದ ಸಬ್ಸಿಡಿ ಹಣದ ಪೋಲಾಗುವಿಕೆ, ಭ್ರಷ್ಟಾಚಾರಕ್ಕೆ ಕಡಿವಾಣಹಾಕುವಲ್ಲಿ ಮಹತ್ವದ ಪಾತ್ರವಹಿಸಿವೆ. ಯುಪಿಐನಂತಹ ಸಾಧನಗಳ ಜೊತೆಗೆ "ಜಾಮ್ ತ್ರಿವಳಿ"ಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್‍ಗೆ ಇಂಬು ದೊರೆಯುತ್ತಿರುವುದು ಹಾಗೂ ಕಡಿಮೆ ನಗದು ವ್ಯವಹಾರಕ್ಕೆ ಪ್ರೇರಣೆ ದೊರೆಯುತ್ತಿರುವುದು. ಭವಿಷ್ಯದ ಡಿಜಿಟಲ್ ಕ್ರಾಂತಿಗೆ ಹಾಕಿದ ತಳಪಾಯವಿದು.

"Wants are unlimited while resources are scare." ಎಂಬಂತೆ ಬಜೆಟ್ ಎದುರು ಸಾಕಷ್ಟು ಸವಾಲು, ನಿರೀಕ್ಷೆಗಳು ಗರಿಗೆದರಿ ನಿಂತಿವೆ. ಆದರೆ ವಿಶ್ವದ ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಅದಕ್ಕೆ ಪೂರಕವಾಗಿಲ್ಲ. ಇರುವ ಕನಿಷ್ಟ ಸಂಪನ್ಮೂಲಗಳಲ್ಲೇ ಗರಿಷ್ಟ ಸಾಧನೆ ಮಾಡಬೇಕಾದ ಅನಿವಾರ್ಯತೆ ಜೇಟ್ಲಿಯವರ ಮುಂದಿದೆ. ಈ ಹಂತದಲ್ಲಿ ಅವರು ಎಡವುದಕ್ಕೆ ಕಾರಣವಿಲ್ಲ, ಸಮರ್ಥ ನಾಯಕತ್ವವನ್ನೇ ಪ್ರದರ್ಶಿಸಬೇಕಿದೆ. ಸಂದಿಗ್ಧ ಪರಿಸ್ಥಿತಿಗಳಲ್ಲಿಯೂ ದಿಟ್ಟ ನಿರ್ಧಾರಗಳನ್ನೇ ತೆಗೆದುಕೊಳ್ಳುವ ಅಭ್ಯಾಸವಿರುವ ನರೇಂದ್ರ ಮೋದಿ ಸರಕಾರದ ಸಮತೋಲನಕ್ಕೆ ಹಾಗೂ ಭವಿಷ್ಯಕ್ಕೆ ಈ ಬಜೆಟ್ ಲಿಟ್ಮಸ್ ಟೆಸ್ಟ್ ಆಗಲಿದೆ. ಈ ಬಾರಿ ಎಡವಿದರೆ ಅವಕಾಶ ಮತ್ತೆ ಒದಗುವುದಿಲ್ಲ. ಈ ಸಂಕೀರ್ಣ ಸಮಯವನ್ನು ಜಾಗರೂಕತೆಯಿಂದ ಈಜಿದರೆ ಯುಗಪ್ರವರ್ತಕ ಬದಲಾವಣೆಯಾಗಲಿದೆ. ಅಂಧ ವಿಶ್ವದಲ್ಲಿ ಭಾರತವೆಂಬ ಉಜ್ವಲ ಕಿಡಿಯನ್ನು ಜ್ವಾಲೆಯಾಗಿ ಮುಂದುವರೆಸಿದರೆ 21ನೇ ಶತಮಾನ ಭಾರತದ್ದಾಗಲು ರಹದಾರಿ ತೆರೆದಂತಾಗುತ್ತದೆ. ಹಾಗಾಗಿ ಅಗತ್ಯವಾಗಿ ಇದು “Make or Break Budget".ಶ್ರೇಯಾಂಕ ಎಸ್ ರಾನಡೆ.

Thursday, January 12, 2017

ಸಮಾಜವಾದಿ ಪಕ್ಷದ "ಯಾದವೀ" ಕಲಹ.

ಸಮಾಜವಾದಿ ಪಕ್ಷದ  "ಯಾದವೀ"  ಕಲಹ.

ದಾಯಾದಿ ಕುಟುಂಬ ಕಲಹ ಬಗೆಹರಿಯದೆ ಕುರುಕ್ಷೇತ್ರ ಯುದ್ಧದಲ್ಲಿ ಕೊನೆಯಾದ ಮಹಾಭಾರತದ ಕಥೆ ಭಾರತದ ಸ್ಮøತಿಪಟಲದಲ್ಲಿ ಭದ್ರವಾಗಿ ನೆಲೆಯೂರಿದೆ. ಪರಿಣಾಮ ಗೊತ್ತಿದರೂ ಇಂದಿಗೂ ಮನೆಯೊಳಗೆ ಬಗೆಹರಿಯಬೇಕಾದ ಕುಟುಂಬ ಕಲಹಗಳು ಬೀದಿಗೆ ಬಂದರೂ ನಿಲ್ಲುವುದಿಲ್ಲ. ಅಧಿಕಾರ ಎಂಬ ಪದವಿಯ ಮುಂದೆ ಎಲ್ಲ ಸಂಬಂಧಗಳೂ ಶೂನ್ಯವಾಗಿ ಬಿಡುತ್ತವೆ. ಭಾರತೀಯ ರಾಜಕಾರಣದಲ್ಲಿ ಇಂತಹ ಕೆಲವಾರು ಉದಾಹರಣೆಗಳನ್ನು ಇಂದಿಗೂ ಕಾಣಲು ಸಾಧ್ಯವಿದೆ. ಇತಿಹಾಸದಿಂದ ಪಾಠ ಕಲಿಯುವ ಬದಲು ಗತಕ್ಕೆ ಮತ್ತೊಂದು ನಿದರ್ಶನವಾಗುವ ಅಪಾಯವೇ ಹೆಚ್ಚುತ್ತಿದೆ. ಬಹುಶಃ ಮುನುಷ್ಯ ಬದುಕಿನ ಆಂತರ್ಯದಲ್ಲಿಯೇ ಅಡಗಿ ಜೊತೆಯಲ್ಲಿಯೇ ಅವಸಾನ ಹೊಂದಲಿರುವ "ಹುಟ್ಟುತ್ತ ಅಣ್ಣತಮ್ಮಂದಿರು ಬೆಳೆಯುತ್ತ ದಾಯಾದಿಗಳು" ಎಂಬ ಗಾದೆ ಮಾತು ಕಾಲದಿಂದ ಕಾಲಕ್ಕೆ ಆನ್ವಯಿಕತೆಯನ್ನು ಒದಗಿಸುತ್ತಿದೆ.

Courtesy: Famous cartoon on the SP tussle.


ಉತ್ತರಪ್ರದೇಶದಲ್ಲಿ 25 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸಮಾಜವಾದಿ ಪಕ್ಷದಲ್ಲಿ ಈಗ ಅದರ ನೇತಾರ ಮುಲಾಯಂ ಸಿಂಗ್ ಯಾದವ್, ಅಮರ್ ಸಿಂಗ್, ಶಿವಪಾಲ್ ಸಿಂಗ್ ಹಾಗೂ ತನ್ನದೇ ಸ್ವಂತ ಮಗ ಅಖಿಲೇಶ್ ಸಿಂಗ್ ಯಾದವ್, ದಾಯಾದಿ ರಾಮ್‍ಗೋಪಾಲ್ ಯಾದವ್ ನಡುವೆ ಸೈಕಲ್ ನೇತೃತ್ವಕ್ಕಾಗಿ ನಡೆಯುತ್ತಿರುವ ಯುದ್ಧ ಚುನಾವಣಾ ಆಯೋಗದ ಕಟಕಟೆಯಲ್ಲಿ ನಿಂತಿದೆ. ಚುನಾವಣೆಯ ಕಾವು ಎರಡೂ ಬಣಗಳನ್ನು ಶಾಂತಗೊಳಿಸುತ್ತಿದ್ದರೆ ದಿನದಿಂದ ದಿನಕ್ಕೆ ರಾಜಿ ಸಂಧಾನದ ಆಯ್ಕೆ ಮರೀಚಿಕೆಯಾಗುತ್ತಿದೆ. ಈ ಸಂಘರ್ಷ ಎಷ್ಟರ ಮಟ್ಟಿಗಿದೆಯೆಂದರೆ ಪಕ್ಷ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಒಂದೋ ಸಮಾಜವಾದಿ ಪಕ್ಷ ಹಳೆಯ ಹಾಗೂ ಹೊಸ ತಲೆಮಾರಿನ ನಾಯಕತ್ವದ ನೆಲೆಯಲ್ಲಿ ವಿಭಜನೆಯಾಗಲಿದೆ. ಇಲ್ಲವಾದಲ್ಲಿ ಕಾಲಾಂತರದಲ್ಲಿ ಮಗನಿಂದಲೇ ಹೊಸ ಪಕ್ಷವೊಂದು ರೂಪುಗೊಳ್ಳುವ ಸಾಧ್ಯತೆಯಿದೆ.

"ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ
ಅವರು ಜೀವನವೆಂಬ ಹಂಬಲಕ್ಕೆ ಹಾತೋರೆವ ಮಕ್ಕಳು
ಅವರು ನಿಮ್ಮ ಮೂಲಕ ಬರುತ್ತಾರೆ ಆದರೆ ನಿಮ್ಮಿಂದಲ್ಲ
ಅವರು ನಿಮ್ಮೊಡನಿದ್ದೂ ನಿಮ್ಮವರಾಗರು..."
ಮಕ್ಕಳ ಮೇಲಿನ ಖಲೀಲ್ ಗಿಬ್ರಾನನ 'ಆನ್ ಚಿಲ್ಡರ್ನ್' ಕವನ ಇಳಿವಯಸ್ಸಿನ ರಾಜಕಾರಣ ಹಾಗೂ ಬದುಕನ್ನು ನೋಡುತ್ತಿರುವ ಮುಲಾಯಂ ಸಿಂಗ್‍ನ ಅಳಲಿನ ಕನವರಿಕೆಯಂತೆಯೂ ತೋರುತ್ತದೆ. ಸ್ವಂತ ಮಗನೇ ಅಪ್ಪನನ್ನು ಪಕ್ಷದಿಂದ ಉಚ್ಛಾಟಿಸಿ ಸಮಾಜವಾದಿ ಪಕ್ಷವನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲೆತ್ನಿಸುತ್ತಿರುವ ಆ ಮೂಲಕ ಅಪ್ಪನನ್ನೇ ಬದಿಗೆ ಸರಿಸಲು ಹೊರಟಿರುವ ಅಖಿಲೇಶ್ ಯಾದವ್ ಈ ಕವನದಲ್ಲಿ ಬಂದಿರುವ ಮಕ್ಕಳ ಪ್ರತಿಮೆಯಂತೆ ಕಾಣುತ್ತಿದ್ದಾನೆ. ಜಯಪ್ರಕಾಶ್ ನಾರಾಯಣ್ ಚಳುವಳಿಯಿಂದ ಪ್ರೇರಿತರಾಗಿ, ಜನಸಂಖ್ಯೆಯಲ್ಲಿ ಹಾಗೂ ಜಾತಿ ಪ್ರಾಬಲ್ಯದಲ್ಲಿ ದೇಶದ ಅತೀ ದೊಡ್ಡ ರಾಜ್ಯ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಜನ್ಮತಾಳುತ್ತದೆ. ಮುಲಾಯಂ ಪಕ್ಷ ಅಧಿಕಾರಕ್ಕೇರಲು ಮುಂದೆ ಮಗನನ್ನೇ ಮುಖ್ಯಮಂತ್ರಿಯನ್ನಾಗಿಸಲು ಸಾಕಷ್ಟು ಶ್ರಮ ಪಡುತ್ತಾರೆ. ಇಷ್ಟೆಲ್ಲವನ್ನೂ ತಮ್ಮ ಕುಟುಂಬಕ್ಕಾಗಿ ಮಾಡಿದ ಮುಲಾಯಂಗೆ ಕೊನೆಯಲ್ಲಿ ಸಿಕ್ಕಿದು ಅದೇ ಪಕ್ಷದಿಂದ ಉಚ್ಛಾಟನೆಯ ಬಹುಮಾನ. ಈ ಉಚ್ಛಾಟನೆಯ ತೀರ್ಪನ್ನು ಚುನಾವಣಾ ಆಯೋಗ ನೀಡಲಿದೆ. ಆದರೆ ಮಗನಿಂದಾದ ಅಪಮಾನವನ್ನು ಮುಲಾಯಂ ತಮ್ಮ  ಜೀವಿತಾವಧಿಯಲ್ಲಿ ಮರೆಯಲು ಸಾಧ್ಯವಿಲ್ಲ. ಅನೇಕ ರಾಜಕೀಯ ಚುನಾವಣೆಗಳನ್ನು ಗೆದ್ದಿರುವ ಮುಲಾಯಂ ಸಿಂಗ್ ಜೀವನವೆಂಬ ಚುನಾವಣೆಯಲ್ಲಿ ವಿಫಲರಾಗಿ ಸೋತಿದ್ದಾರೆ. ಈ ಎಲ್ಲಾ ನಾಟಕೀಯ ಆಡುಂಬೋಲದಲ್ಲಿ ಹೈರಾಣಾಗಿ, ಗೊಂದಲದಿಂದ ತಲೆಕೆಳಗಾಗಿ ಕುಳಿತಿರುವುದು ಉತ್ತರಪ್ರದೇಶದ ಮತದಾರರು.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದೆ. 403 ಸದಸ್ಯಬಲದ ವಿಧಾನಸಭೆಗೆ ಜನವರಿ 17ರಿಂದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. 224 ಜನಪ್ರತಿನಿಧಿಗಳನ್ನು (224 ಇದು ಕರ್ನಾಟಕದ ಒಟ್ಟು ವಿಧಾನಸಭೆಯ ಸಂಖ್ಯಾಬಲ) ಹೊಂದಿರುವ ಉತ್ತರ ಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷಕ್ಕೆ ಅಪ್ಪ ಮಗನ ಜಗಳದಲ್ಲಿ ಪಕ್ಷದ "ಸೈಕಲ್" ಚಿಹ್ನೆ ಯಾವ ಬಣದ ಪಾಲಾಗಲಿದೆ? ಎಂಬ ಸಮಸ್ಯೆ  ಕಗ್ಗಂಟಾಗಿ ಪರಿಣಮಿಸಿದೆ.

ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ ಮಗ ಅಖಿಲೇಶ್ ಸಿಂಗ್ ಯಾದವ್ ಹಾಗೂ ರಾಮ್ ಗೋಪಾಲ್ ಯಾದವ್‍ರನ್ನು ಪಕ್ಷದಿಂದ ಉಚ್ಛಾಟಿಸುವ ಅಪ್ಪ. ಅದಾದ ಒಂದೇ ದಿನಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ "ನೇತಾಜಿ", ಮುಲಾಯಂ ಸಿಂಗ್ ಯಾದವ್‍ರ ಒಪ್ಪಿಗೆಯಿಲ್ಲದೆ ರಾಷ್ಟ್ರೀಯ ಕಾರ್ಯಕಾರಣಿಯನ್ನು ಕರೆಯಲಾಗುತ್ತದೆ, ಅಲ್ಲಿ 224 ಜನಪ್ರತಿನಿಧಿಗಳ ಸಂಖ್ಯಾಬಲ ತನಗೇ ಇದೆಯೆಂದು ಅಖಿಲೇಶ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ. ಅಪ್ಪ ಮುಲಾಯಂರನ್ನು ಆ ಸ್ಥಾನದಿಂದ ವಜಾಗೊಳಿಸುತ್ತಾರೆ. ಇದು ಅಧಿಕಾರಕ್ಕಾಗಿ ತಂದೆಯನ್ನು ಸೆರೆಯಲ್ಲಿಟ್ಟು ಸೋದರರನ್ನು ಕೊಂದ ಔರಂಗಜೇಬನ ಇತಿಹಾಸದ ಕಥೆಯಲ್ಲ. ಹಿಂದಿಯಲ್ಲಿ ಪ್ರಕಾಶ್ ಝಾ ನಿರ್ದೇಶಿಸಿದ್ದ ರಾಜ್‍ನೀತಿ ಸಿನಿಮಾಕ್ಕಿಂತಲೂ ರೋಚಕವಾಗಿ ಕಣ್ಣೆದುರಿಗೆ ನಡೆಯುತ್ತಿರುವ ಉತ್ತರ ಪ್ರದೇಶದ ಕ್ಷಿಪ್ರ ಹಾಗೂ ಕೀಳು ರಾಜಕೀಯ ಬೆಳವಣಿಗೆಗಳ ಮೂರ್ತ ರೂಪ.

ಕಳೆದ ಒಂದು ವರ್ಷದಿಂದ ಅಧಿಕಾರಕ್ಕಾಗಿ ಶೀತಲವಾಗಿ ಒಳಗೊಳಗೆ ನಡೆಯುತ್ತಿರುವ ಅಪ್ಪ-ಮಗನ ನಡುವಿನ "ಯಾದವಿ" ಕಲಹ, ಕನಿಷ್ಟ ಪಕ್ಷದೊಳಗೇ ಬಗೆಹರಿಯಬೇಕಿದ್ದ ಮನೆಜಗಳ ಬೀದಿಗೆ ಬಂದು ಸಮಾಜವಾದಿ ಪಕ್ಷಕ್ಕೆ ಯಾರು ನಿಜವಾದ ನಾಯಕ? ಯಾರೊಂದಿಗೆ ಜನಪ್ರತಿನಿಧಿಗಳು ನಿಂತಿದ್ದಾರೆ? ಕೊನೆಗೆ ನೇತಾಜಿ ಎಂದು ಕರೆಸಿಕೊಳ್ಳುವ ಸಮಾಜವಾದಿ ಪಕ್ಷವನ್ನು ಕಟ್ಟಿ ಬೆಳೆಸಿದ 'ಹಳೆಯ ತಲೆ' ಮುಲಾಯಂ ಸಿಂಗ್ ಯಾದವ್ ಪಾಲಾಗುವುದೋ ಅಥವಾ ಅವರ ಮಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರಿಗೆ ಪಕ್ಷದ ಸೈಕಲ್ ಚಿಹ್ನೆ ದೊರೆಯಲಿದೆಯೊ? ಈ ಪ್ರಶ್ನೆಗಳ ಗೊಂದಲ ಇದೀಗ ಕೇಂದ್ರ ಚುನಾವಣಾ ಆಯೋಗದ ಅಂಗಣದಲ್ಲಿ ಬಂದು ನಿಂತಿದೆ. ಜನವರಿ 13ರಂದು ಚುನಾವಣಾ ಆಯೋಗ ಯಾವ ನಿರ್ಣಯ ಕೈಗೊಳ್ಳುತ್ತದೆಯೋ ಅದರ ಮೇಲೆ ಸಮಾಜವಾದಿ ಪಕ್ಷದ ಹಾಗೂ ಅಪ್ಪ ಮಗನ ಕಲಹದ ಭವಿಷ್ಯಕ್ಕೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಅಲ್ಲಿಯವರೆಗೂ ಎಲ್ಲವೂ ಅಸ್ಪಷ್ಟ, ಉತ್ತರಪ್ರದೇಶದ ಆಡಳಿತದಂತೆ ಅರಾಜಕ.

-ಚಿಹ್ನೆಯ ಸಮಸ್ಯೆಯನ್ನು ಕೇಂದ್ರ ಚುನಾವಣಾ ಆಯೋಗ ಹೇಗೆ ನಿರ್ವಹಿಸಲಿದೆ?.

ಭಾರತೀಯ ಚುನಾವಣಾ ಆಯೋಗದ ಮುಂದಿರುವ ಆಯ್ಕೆ:
ಸರಳವಾಗಿ ಹೇಳುವುದಾದರೆ ಲೋಕಸಭೆ, ರಾಜ್ಯಸಭೆ, ವಿಧಾನಸಭೆಯಂತಹ ಮಹತ್ವದ ಚುನಾವಣೆಗಳನ್ನು ನಡೆಸುವ ಹೊಣೆಹೊತ್ತ ಕೇಂದ್ರ ಚುನಾವಣಾ ಆಯೋಗ, ಚುನಾವಣಾ ಆಯೋಗದಿಂದ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ತಮ್ಮ ಕಲಹಗಳನ್ನು ಆಂತರಿಕವಾಗಿಯೇ ಪರಿಹರಿಸಿಕೊಳ್ಳಲು ಅಥವಾ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಸೂಚಿಸುತ್ತದೆ. ಆದರೆ ಚುನಾವಣಾ ಆಯೋಗದ ಮಾನ್ಯತೆಯಿರುವ ರಾಜಕೀಯ ಪಕ್ಷದೊಳಗೆ ಅಧಿಕೃತ ಪಕ್ಷದ ಚಿಹ್ನೆಯನ್ನು "ಯಾವ ಬಣಕ್ಕೆ ನೀಡಬೇಕು ಅಥವಾ ಯಾರಿಗೂ ನೀಡಬಾರದು" ಎಂಬ ನಿರ್ಧಾರವನ್ನು ಚುನಾವಣಾ ಆಯೋಗವೇ ಮಾಡುತ್ತದೆ. 

ಚುನಾವಣಾ ಆಯೋಗದ ಅಧಿಕಾರ:
"ಚುನಾವಣಾ ಚಿಹ್ನೆಗಳು(ಮೀಸಲು ಹಾಗೂ ಹಂಚಿಕೆ)ಆದೇಶ, 1968"ರ ಅನ್ವಯ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳನ್ನು ಮಾನ್ಯಮಾಡುವ ಹಾಗೂ ಅವುಗಳಿಗೆ ಅಧಿಕೃತ ಚಿಹ್ನೆಯನ್ನು ನೀಡುವ ಅಧಿಕಾರವನ್ನು ನೀಡಲಾಗಿದೆ. ಈ ಆದೇಶದ 15ನೇ ಪ್ಯಾರಾ ಪ್ರಕಾರ ಚುನಾವಣಾ ಆಯೋಗದ ಮಾನ್ಯತೆಯಿರುವ ರಾಜಕೀಯ ಪಕ್ಷವೊಂದರ ವಿವಿಧ ಬಣ-ಗುಂಪುಗಳ ನಡುವೆ ಪಕ್ಷದ ಹೆಸರಿಗಾಗಿ ಅಥವಾ ಪಕ್ಷದ ಚಿಹ್ನೆಗಾಗಿ ನಡೆಯುವ ಕಿತ್ತಾಟದಲ್ಲಿ ಯಾರು ನಿಜವಾದ ಹಕ್ಕುದಾದರು ಎಂಬುದನ್ನು ನಿರ್ಧರಿಸುವ ಹಕ್ಕು ಕೇವಲ ಮತ್ತು ಕೇವಲ ಚುನಾವಣಾ ಆಯೋಗಕ್ಕಿದೆ. ಬೇರೆ ಯಾರಿಗೂ ಈ ಅಧಿಕಾರವನ್ನು ನೀಡಲಾಗಿಲ್ಲ.

ತೀರ್ಪಿನ ಪ್ರಕ್ರಿಯೆ:
ಈ ನಿರ್ಣಯಕ್ಕಾಗಿ ಚುನಾವಣಾ ಆಯೋಗ ಮೊದಲು ಚುನಾವಣಾ ವಿಚಾರಣಾ ಸಮಿತಿಯನ್ನು ರೂಪಿಸಿ ಪಕ್ಷದ ಚಿಹ್ನೆಗಾಗಿ (ಅಥವಾ ಹೆಸರಿಗಾಗಿ) ಕಾದಾಡುತ್ತಿರುವ ಬಣಗಳು ಸಲ್ಲಿಸಿರುವ ವಾದ-ಪ್ರತಿವಾದಗಳನ್ನು ಅಧ್ಯಯನಿಸುತ್ತದೆ. ಪಕ್ಷ ರೂಪುಗೊಂಡ ಬಗೆ, ಸಾಂಸ್ಥಿಕ ಸ್ವರೂಪ, ಪಕ್ಷ ಒಟ್ಟಾಗಿದ್ದಾಗ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಗುಂಪು, ವಿವಿಧ ಸಮಿತಿಗಳು ಇತ್ಯಾದಿಗಳ ಕೂಲಂಕುಶ ಅಧ್ಯಯನ ನಡೆಸುತ್ತದೆ. ಅಲ್ಲಿನ ಪ್ರತಿನಿಧಿಗಳು ಯಾರನ್ನು ತಮ್ಮ ನಾಯಕರನ್ನಾಗಿ ಸಮರ್ಥಿಸುತ್ತಾರೆ ಎಂಬುದನ್ನು ಪರಿಗಣಿಸುತ್ತದೆ. ನಂತರ "ಬಹುಮತ" ಇರುವ ಅಂದರೆ ಸಂಘಟನೆಯ ಸಾಂಸ್ಥಿಕ ಬೆಂಬಲ ಹಾಗೂ ಚುನಾಯಿತ ಪ್ರತಿನಿಧಿಗಳ ಬೆಂಬಲ ಯಾರಿಗೆ ಹೆಚ್ಚಿದೆಯೋ ಅವರಿಗೆ ಪಕ್ಷದ ಅಧಿಕೃತ ಚಿಹ್ನೆಯನ್ನು ನೀಡಲಾಗುತ್ತದೆ. ಅಥವಾ ಗೊಂದಲ ಮುಂದುವರೆದರೆ ಚುನಾವಣಾ ಆಯೋಗ ಚಿಹ್ನೆಯನ್ನು ಯಾರಿಗೂ ನೀಡದೆಯೂ ಇರಬಹುದು. ಚುನಾವಣಾ ಆಯೋಗ ಒಮ್ಮೆ ನೀಡುವ ನಿರ್ಣಯವನ್ನು ಎರಡೂ ಬಣಗಳು ಒಪ್ಪಲೇಬೆಕು. ಅದನ್ನು ಮೇಲ್ಮನವಿಯ ಮೂಲಕ ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ.

ಬಹುಮತ ಯಾರಿಗೋ ಅವರಿಗೇ ಪಕ್ಷದ ಚಿಹ್ನೆ:
ಚುನಾವಣಾ ಆಯೋಗದ ತನಿಖೆಯಲ್ಲಿ ಬಹುಮತ ಯಾವ ಬಣದತ್ತ ಅಥವಾ ಯಾರ ಕಡೆಗಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗದಿದ್ದರೆ ಅಥವಾ ಎರಡು ಗುಂಪಿನತ್ತಲೂ ಸಮಾನ ಬೆಂಬಲ ವ್ಯಕ್ತವಾಗಿದ್ದರೆ ಆಗ ಮೂಲ ಪ್ರಶ್ನೆ ಹಾಗೆಯೇ ಉಳಿದುಕೊಳ್ಳುತ್ತದೆ. ಅಂತಹ ಸಂಕೀರ್ಣ ಸಂದರ್ಭಗಳಲ್ಲಿ ಚುನಾವಣಾ ಆಯೋಗ ಗಟ್ಟಿ ನಿರ್ಧಾರಕ್ಕೆ ಬರಬೇಕಾಗುತ್ತದೆ. ಆಯೋಗಕ್ಕೆ ಕೂಲಕುಂಶ ಅಧ್ಯಯನ ಹಾಗೂ ತನಿಖೆಗಾಗಿ ಸಮಂiÀi ಬೇಕಿರುವುದರಿಂದ ಚುನಾವಣೆಯ ಈ ಹೊತ್ತಿನಲ್ಲಿ ತಾತ್ಕಾಲಿಕವಾಗಿ ಪಕ್ಷದ ಹಳೆಯ ಚಿಹ್ನೆಯನ್ನು ಅಸಿಂಧುಗೊಳಿಸಿ ಎರಡೂ ಬಣಗಳಿಗೂ ಹೊಸತಾದ ಪ್ರತ್ಯೇಕ ಹೆಸರಿನ ಹಾಗೂ ಪ್ರತ್ಯೇಕ ಚಿಹ್ನೆಗಳ ಅಡಿಯಲ್ಲಿ ಚುನಾವಣೆಯನ್ನು ಸ್ಪರ್ಧಿಸಲು ಆದೇಶಿಸಬಹುದು. ಅಥವಾ ಈಗಿರುವ ಹೆಸರಿನ ಹಿಂದೆ ಅಥವಾ ಮುಂದೆ ಹೆಚ್ಚುವರಿ ಪದಪುಂಜವನ್ನು ಸೇರಿಸಿಕೊಂಡು ಚುನಾವಣೆಯನ್ನು ಸ್ಪರ್ಧಿಸಲು ತಿಳಿಸಬಹುದು. ಉದಾಹರಣೆಗೆ: ಕಾಂಗ್ರೆಸ್(ಜೆ), ಕಾಂಗ್ರೆಸ್(ಒ) ಜನತಾದಳ(ಜಾತ್ಯಾತೀತ) ಇತ್ಯಾದಿ.

ಭಾರತದ ಇತಿಹಾಸದಲ್ಲಿ ಪ್ರಮುಖ ಆಂತರಿಕ ಪಕ್ಷ ಕಲಹ:
1964ರ ಡಿಸೆಂಬರ್‍ನಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷ ಚುನಾವಣಾ ಆಯೋಗಕ್ಕೆ ತೆರಳಿ ತಮ್ಮನ್ನು ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾಕ್ರ್ಸಿಸ್ಟ್) ಎಂಬ ಪ್ರತ್ಯೇಕ ಹೆಸರಿನಿಂದ ಮಾನ್ಯಮಾಡಬೇಕೆಂದು ಕೇಳಿಕೊಂಡಿತು. 1951ರ ಪ್ರಜಾಪ್ರತಿನಿಧಿ ಕಾಯ್ದೆಯ "ಚುನಾವಣಾ ಚಿಹ್ನೆಗಳು(ಮೀಸಲು ಹಾಗೂ ಹಂಚಿಕೆ)ಆದೇಶ, 1968"ರ ಆದೇಶ ಜಾರಿಯಾಗಿರದಿದ್ದ ಕಾರಣ ಆಂದ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳ ಈ ಮೂರು ರಾಜ್ಯಗಳಲ್ಲಿ 4% ಮತ ಪ್ರಮಾಣವಿರುವ ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾಕ್ರ್ಸಿಸ್ಟ್) ಪ್ರತ್ಯೇಕ ಪಕ್ಷವಾಗಿ ಮಾನ್ಯಗೊಳಿಸಿತು. 1968ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ವಿ.ವಿ.ಗಿರಿಯವರನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿಯವರು "ಆತ್ಮಸಾಕ್ಷಿ"ಯ ಆಧಾರದಲ್ಲಿ ಕಾಂಗ್ರೆಸ್‍ನ ವಿಪ್ ನಿರಾಕರಿಸುವಂತೆ ಕರೆ ನೀಡಿದ್ದರು. ಆಗ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ ಇಂದಿರಾಗಾಂಧಿಯವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು. ಆ ಹೊತ್ತಿಗೆ "ಹಳೆ" ಕಾಂಗ್ರೆಸ್(ಒ) ಹಾಗೂ ಇಂದಿರಾ ನೇತೃತ್ವದ "ಹೊಸ" ಕಾಂಗ್ರೆಸ್(ಜೆ) ಎಂಬುದಾಗಿ ವಿಭಜನೆಗೊಂಡಿತ್ತು. 1987ರಲ್ಲಿ ಎಂ.ಜಿ.ರಾಮಚಂದ್ರನ್ ವಿಧಿವಶರಾದಾಗ ಎಐಡಿಎಂಕೆಯಲ್ಲಿಯೂ ಜಯಲಲಿತಾ ಹಾಗೂ ಜಾನಕಿ ಬಣಗಳ ನಡುವೆ ಜಗಳ ಏರ್ಪಟ್ಟಿತ್ತು. ಚುನಾವಣಾ ಆಯೋಗ ಮಧ್ಯಪ್ರವೇಶಿಸುವ ಮುನ್ನವೇ ಆಂತರಿಕವಾಗಿ ಸಮಸ್ಯೆ ಬಗೆಹರಿದಿತ್ತು. ಇವುಗಳ ನಂತರ ಈಗ ಸಮಾಜವಾದಿ ಪಕ್ಷದೊಳಗಿನ ಜಗಳ ಚುನಾವಣಾ ಆಯೋಗದ ಮೆಟ್ಟಿಲೇರಿದೆ.

ಏನಾಗಲಿದೆ?:
ಚುನಾವಣಾ ಆಯೋಗ ಚುನಾವಣಾ ಚಿಹ್ನೆಯ ಸಮಸ್ಯೆಯ ಗೊಂದಲ ಪರಿಹಾರಕ್ಕಾಗಿ ಜನವರಿ 13ರಂದು ಸಭೆ ಸೇರಲಿದೆ. ಜನವರಿ 17ರಂದು ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ಹಾಗಾಗಿ ಅಷ್ಟರೊಳಗೆ ನಿರ್ಣಯ ತೆಗೆದುಕೊಳ್ಳುವಂತೆ ಸಮಾಜವಾದಿ ಪಕ್ಷ ಚುನಾವಣಾ ಆಯೋಗವನ್ನು ಬೇಡುತ್ತಿದೆ. ಸಧ್ಯದ ಪರಿಸ್ಥಿತಿಯಲ್ಲಿ ಸಮಾಜವಾದಿ ಪಕ್ಷದ ಬಣಗಳು ಸಂಧಾನವಾಗದ ಹೊರತು ಒಂದೇ ದಿನದಲ್ಲಿ ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೆ ಚುನಾವಣಾ ಆಯೋಗಕ್ಕೆ ಸಾಧ್ಯವಾಗದು. ಆದ್ದರಿಂದ ತಾತ್ಕಾಲಿಕವಾಗಿ ಹೆಸರು ಹಾಗೂ ಚಿಹ್ನೆಯನ್ನು ಅಸಿಂಧುಗೊಳಿಸಿ ಹೊಸ ಚಿಹ್ನೆ ಮತ್ತು ಹೆಸರಿನೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಎರಡೂ ಬಣಗಳಿಗೂ ತಿಳಿಸಬಹುದು.

ಮತ್ತೆ ಒಂದಾದರೆ:
ಹೀಗೆ ವಿಮುಖವಾಗಿರುವ ಎರಡು ಬಣಗಳು ಎರಡು ಪಕ್ಷಗಳಾಗಿ ಚುನಾವಣೆಯನ್ನು ಎದುರಿಸಿ ಸೋಲುವಂತಾದರೆ; ನಿರೀಕ್ಷಿತ ಪ್ರಮಾಣದ ಯಶಸ್ಸು ಸಿಗದಿದ್ದರೆ ಅಂದರೆ ಕೆಟ್ಟು ಬುದ್ಧಿಬಂದರೆ ಅಥವಾ ಕೆಡುವ ಮುನ್ನವೇ ಬುದ್ಧಿ ಬಂದು ಪ್ರತ್ಯೇಕತೆಯ ಮಿತಿಯರಿತು ಮೊದಲೇ ಅರಿತು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಎರಡೂ ಬಣಗಳು ಒಂದಾಗಿ ಏಕೀಕೃತ ಮಾತೃ ಪಕ್ಷವಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ವಿನಂತಿ ಸಲ್ಲಿಸಿದರೆ ಆಗ ಮತ್ತೆ ಮೊದಲಿನಂತೆಯೇ ಪಕ್ಷದ ಮೂಲ ಹೆಸರು ಹಾಗೂ ಚಿಹ್ನೆ ಪಕ್ಷಕ್ಕೆ ದೊರೆಯುವ ಸಾಧ್ಯತೆಯಿದೆ.
--
ಪಕ್ಷದ ಚುನಾವಣಾ ಚಿಹ್ನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ವಿರೋಧಿ ಬಣವನ್ನು ಮೂಲೆಗುಂಪಾಗಿಸುವುದು ಎರಡೂ ಬಣಗಳ ಆಲೋಚನೆ. ಪಕ್ಷದ ಅಧಿಕೃತ ಚಿಹ್ನೆ ತಮ್ಮದೆಂದು ವಾದಿಸುತ್ತಿರುವವರ ಮುಂದೆ ಜಗಳಕ್ಕೆ ಸಮಯವಿಲ್ಲ, ಚಿಹ್ನೆ ಪಡೆಯುವ ಪ್ರಯತ್ನದಲ್ಲಿ ಸೋತವರಿಗೆ ಈ ಹೊತ್ತಿನಲ್ಲಿ ಹೊಸ ಪಕ್ಷವನ್ನು ಸ್ಥಾಪಿಸಿ ಸಂಘಟಿಸುವುದು ಅಸಾಧ್ಯದ ಮಾತು. ಯಾಕೆಂದರೆ ಚುನಾವಣೆ ತಲೆ ಮೇಲೆ ಬಂದು ಕುಳಿತಿದೆ. ಹಾಗಾಗಿ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ತಮ್ಮ ನಾಯಕತ್ವವನ್ನು ಸಾಬೀತುಪಡಿಸಬೇಕಿರುವುದು ಅಪ್ಪ-ಮಗನ ಮುಂದಿರುವ ಸಮಾನ ಸವಾಲು. ಅಖಿಲೇಶ್ ಸೋತರೆ ಭವಿಷ್ಯದಲ್ಲಿ ಹೊಸ ಪಕ್ಷ ರೂಪುಗೊಳ್ಳುವುದಂತು ಸತ್ಯ. ಮುಲಾಯಂ ಸೋತರೆ ಅದು ತಮ್ಮ ತಲೆಮಾರಿನ, ಸಮಾಜವಾದಿ ರಾಜಕಾರಣ ಹಾಗೂ ಪಕ್ಷದಲ್ಲಿನ ಮನ್ವಂತರಕ್ಕೆ ವೇದಿಕೆಯಾಗಲಿದೆ.

ಅಪ್ಪ-ಮಗನಲ್ಲಿ ಯಾರೇ ಗೆದ್ದರೂ  ಸಮಾಜವಾದಿ ಪಕ್ಷದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಈ ಮಧ್ಯೆ ಯಾವುದೇ ದಾರಿ ಕಾಣದೆ ಚುನಾವಣೆಗಾಗಿಯೇ ಸಧ್ಯಕ್ಕೆ ಇಬ್ಬರೂ ಹೊಂದಾಣಿಕೆ ಮಾಡಿಕೊಂಡು ನಡೆದರೂ ಒಂದಲ್ಲ ಒಂದು ದಿನ ಬೇಗುದಿಯಂತಿರುವ ಜ್ವಾಲಾಮುಖಿ ಸ್ಫೋಟಗೊಳ್ಳುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಅಪ್ಪ-ಮಗನ ಮಧ್ಯೆ ಸಾಕಷ್ಟು ಜನ ಹಾಗೂ ಸಂಗತಿಗಳು ಕಾರ್ಯಪ್ರವೃತ್ತರಾಗಿವೆ. ಇದು ಹೇಗೆಂದರೆ ಕರ್ನಾಟಕದ ಜೆಡಿಎಸ್‍ನಲ್ಲಿ ದೇವೇಗೌಡರು ತಮ್ಮ ಮಗ ಕುಮಾರಸ್ವಾಮಿಯ ತಲೆಯನ್ನು ಕೆಲವು ಶಾಸಕರು ಕೆಡಿಸುತ್ತಿದ್ದಾರೆ ಎಂದು ಅವರನ್ನು ಪಕ್ಷದಿಂದ ದೂರವಿಟ್ಟಿದ್ದಾರಲ್ಲ ಹಾಗೆ. ಇಲ್ಲಿ ರಾಮ್‍ಗೋಪಾಲ್ ಯಾದವ್ ಅಖಿಲೇಶ್ ಹಿಂದೆ ನಿಂತಿದ್ದರೆ ಅಮರ್‍ಸಿಂಗ್ ಶಿವಪಾಲ್ ಯಾದವ್ ಮುಲಾಯಂ ಸಿಂಗ್ ಜೊತೆಗೆ ನಿಂತಿದ್ದಾರೆ. ಪ್ರಾಯಶಃ ಮುಲಾಯಂ ಕುಟುಂಬದ ಇದೇ ಸದಸ್ಯರು ಅಪ್ಪ-ಮಗನ ನಡುವೆ ಗೋಡೆಯಾಗಿರುವುದು. 

ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಅಖಿಲೇಶ್ ಯಾದವ್ ಸರಕಾರಕ್ಕೆ, ಚುನಾವಣೆಯ ಹೊಸ್ತಿಲಿನಲ್ಲಿ ಜನರನ್ನು ಹೊಸ ಹೊಸ ಗೊಂದಲಗಳಿಗೆ ದೂಡುತ್ತಿದೆ. ತನ್ನ ಉಚ್ಛಾಟನೆಯನ್ನೇ ರಾಜಕೀಯ ವರ್ಚಸ್ಸಿನ ದಾಳವಾಗಿಸಿಕೊಂಡು ಜನರ ಭಾವನೆ, ಮರುಕ ಹಾಗೂ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ತಮ್ಮ ಕಳಪೆ ಆಡಳಿತ, ಮುಳುಗಿದ ಭರವಸೆಗಳು ಹಾಗೂ ಮಿತಿಗಳನ್ನು ಜನರ ಮನಸ್ಸಿನಿಂದ ತೆಗೆದುಹಾಕಲು ಬಯಸುತ್ತಿರುವ ಮಗನ ಆಸ್ಥೆಯಿಂದ ಅಪ್ಪನೂ ಸೋಲುತ್ತಿದ್ದಾನೆ. ಪಕ್ಷವೂ ಕಳೆಗಟ್ಟುತ್ತಿದೆ. ಕೆಲವು ವರ್ಷಗಳ ಸಮಕಾಲೀನ ಚರಿತ್ರೆಯೇ ವಿವರಿಸುತ್ತಿರುವಂತೆ ಸಮಾಜವಾದಿ ಪಕ್ಷದಲ್ಲಿ ಅನಿರೀಕ್ಷಿತ ಸಂಗತಿಗಳೇ ಹೊಸ ನಿರೀಕ್ಷೆಗಳಾಗುತ್ತಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಚುನಾವಣೆಯ ಹೊಸ್ತಿಲಲ್ಲಿ ಮತ್ತು ರಾಜಕೀಯ ಪಡಸಾಲೆಯಲ್ಲಿ ಸಮಾಜವಾದಿ ಪಕ್ಷದಲ್ಲಿ ಅನಿಚ್ಛಿತತೆ, ನಾಟಕೀಯತೆ ಹಾಗೂ ನಿರುತ್ತರತೆ ಎಂಬುದು ಅನಾಯಾಸ ರಾಜಕೀಯ ಪರಂಪರೆಯಾಗಿ ಮುಂದುವರೆಯುತ್ತಿದೆ.

ಶ್ರೇಯಾಂಕ ಎಸ್ ರಾನಡೆ.

Tuesday, December 20, 2016

Vittiya Saksharta and Educational Institutions' Responsibilities. ವಿತ್ತೀಯ ಸಾಕ್ಷರತೆ ಮತ್ತು ಉನ್ನತ ಶಿಕ್ಷಣ ಕೇಂದ್ರಗಳ ಸಾಮಾಜಿಕ ಬದ್ಧತೆ:


Like Corporate Social Responsibility isn't it a time to invoke Higher Education Institutions's Social Responsibility? Unlike CSR, in HSR there is no nominal value for its service but has intellectual value and output.
1. What and How Higher educational institutions are required to act when there is a need for the national/societal cause?
2. How IIT's, IIM's, Professional institutions, Central and State Universities needed to take forward the demonetization drive and digital literacy abhiyan.
3. What and how they can be the agents of the change which was long overdue.
4. Can they become the reason and force behind overhauling the digital revolution in rural and urban India?, Among illiterate and underprivileged?
5. Should students and teachers contribute some time, knowledge as a part of their curriculum for the society's well being and nation's digital empowerment?

A brief discussion on above mentioned ideas and bit more.
Read my piece on "Digital literacy(Cashless economy) and the Higher education institution's responsibilities. Open for discussion.

------------

ವಿತ್ತೀಯ ಸಾಕ್ಷರತೆ ಮತ್ತು ಉನ್ನತ ಶಿಕ್ಷಣ ಕೇಂದ್ರಗಳ ಸಾಮಾಜಿಕ ಬದ್ಧತೆ:

ಭಾರತೀಯ ರಿಸರ್ವ್ ಬ್ಯಾಂಕ್‍ನ ಅಕ್ಟೋಬರ್ 2016ರ ದಾಖಲೆಯ ಪ್ರಕಾರ, 125 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಭಾರತ ದೇಶದಲ್ಲಿ ಒಟ್ಟಾರೆ 94.2 ಕೋಟಿ ಡೆಬಿಟ್ ಕಾರ್ಡ್‍ಗಳಿವೆ. ಅಕ್ಟೋಬರ್ ತಿಂಗಳಿನಲ್ಲಿ ಈ ಕಾರ್ಡ್‍ಗಳಿಂದ 2.63 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವಾಗಿದೆ. ಆದರೆ ಇದರಲ್ಲಿ ಶೇಕಡ 90%ಗೂ ಅಧಿಕ ಕಾರ್ಡ್‍ಗಳ ಬಳಕೆಯಾಗಿದ್ದು ಅಟೋಮೇಟೆಡ್ ಟೆಲ್ಲರ್ ಯಂತ್ರ(ಎ.ಟಿ.ಎಂ.)ದಿಂದ ಹಣ ಹೊರತೆಗೆಯುವುದಕ್ಕೆ ಮಾತ್ರ. ಅಂದರೆ ಬರೀ 8% ಕಾರ್ಡ್‍ಗಳನ್ನು ನೇರವಾಗಿ ನೋಟುರಹಿತ ವ್ಯಾಪಾರಕ್ಕಾಗಿ(ಆನ್‍ಲೈನ್ ಮತ್ತು ಆಫ್‍ಲೈನ್) ಬಳಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ವೈರುಧ್ಯದಿಂದ ಕೂಡಿದೆಯೆಂದರೆ ದೇಶದಲ್ಲಿ ಕಾರ್ಡ್‍ಗಳಿಂದ ವ್ಯವಹಾರ ನಡೆಸುವ 15.12ಲಕ್ಷ 'ಪಾಯಿಂಟ್ ಆಫ್ ಸೇಲ್' ಟರ್ಮಿನಲ್‍ಗಳಿವೆ. ಆದರೆ ದೇಶದಲ್ಲಿರುವ ಒಟ್ಟು ಎ.ಟಿ.ಎಂ.ಗಳ ಸಂಖ್ಯೆ ಕೇವಲ 2.20 ಲಕ್ಷ ಮಾತ್ರ. ಚಲಾವಣೆಯಲ್ಲಿರುವ ಶೇಕಡಾ 50% ಡೆಬಿಟ್ ಕಾರ್ಡ್‍ಗಳು ಸಕ್ರಿಯವಾಗಿ ನೋಟು ವಿನಿಮಯಕ್ಕಾಗಿ ಬಳಕೆಯಾಗುತ್ತಿವೆ. ಭಾರತದ ಪ್ರತೀ 10 ಡೆಬಿಟ್ ಕಾರ್ಡ್‍ಗಳಲ್ಲಿ 9 ಕಾರ್ಡ್‍ಗಳನ್ನು ಕೇವಲ ಎ.ಟಿ.ಎಂ. ಯಂತ್ರಗಳಿಂದ ಹಣ ಪಡೆದುಕೊಳ್ಳುವುದಕ್ಕೆ ಮಾತ್ರ ಉಪಯೋಗಿಸಲಾಗುತ್ತಿದೆ. ಅವುಗಳಿಂದ ನೇರವಾಗಿ ನೋಟುರಹಿತ ವ್ಯವಹಾರವಾಗುತ್ತಿಲ್ಲ.
ಇದು 2016ರ ಅಕ್ಟೋಬರ್ ತಿಂಗಳೊಂದರ ದಾಖಲೆಯಲ್ಲ ಬದಲಾಗಿ ದೇಶದ ನೋಟುರಹಿತ(ಕಡಿಮೆ-ನೋಟು) ವ್ಯವಹಾರದ ಸಮಗ್ರ ಚಿತ್ರಣ. ಡೆಬಿಟ್ ಕಾರ್ಡ್‍ಗಳನ್ನು ಹೊಂದಿರುವವರಿಗೆ ಅದನ್ನು ಯಾವುದಕ್ಕೆಲ್ಲ, ಹೇಗೆಲ್ಲ ಬಳಸಬಹುದು ಎಂಬ ಮಾಹಿತಿ ಇರುವುದಿಲ್ಲ. ಅಥವಾ ಬಳಸುವುದಕ್ಕೆ ಬರುವುದಿಲ್ಲ. ನೋಟುರಹಿತ ವ್ಯವಹಾರದಿಂದ ತಮ್ಮ ಬ್ಯಾಂಕ್ ಖಾತೆಯ ಸುರಕ್ಷತೆಗೆ ಧಕ್ಕೆಯಾಗಬಹುದು... ಇತ್ಯಾದಿ ಸವಾಲು, ಗೊಂದಲಗಳು ಹೆಚ್ಚಿನ ಕಾರ್ಡ್ ಬಳಕೆದಾರರನ್ನು ಮೊಬೈಲ್ ವ್ಯಾಲೆಟ್, ಆನ್‍ಲೈನ್ ಬ್ಯಾಂಕಿಂಗ್, ಪಾಯಿಂಟ್ ಆಫ್ ಸೇಲ್ ಸೇವೆಗಳಿಂದ ವಿಮುಖರನ್ನಾಗಿಸುತ್ತಿವೆ. 

ಸರಕಾರ "ಇ-ಪಾಠಶಾಲ"ದ ಮೂಲಕ ಡಿಜಿಟಲ್ ಬ್ಯಾಂಕಿಂಗ್, ನಗದುರಹಿತ ವ್ಯಾಪಾರ ಇತ್ಯಾದಿ ಸಂಗತಿಗಳನ್ನು "ವಿತ್ತೀಯ ಸಾಕ್ಷಾರತಾ ಅಭಿಯಾನ"ದ ಮೂಲಕ ಜನರತ್ತ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದೆ. ಆದರೆ ಜನ್‍ಧನ್ ಯೋಜನೆಯ ಪ್ರಾರಂಭಿಕ ಯಶಸ್ಸಿನ ಹೊರತಾಗಿಯೂ ಈಗಲೂ ದೇಶದ ಅರ್ಧದಷ್ಟು ಜನಸಂಖ್ಯೆ ಬ್ಯಾಂಕ್ ಖಾತೆ ಹೊಂದಿಲ್ಲ. ಡಿಜಿಟಲ್ ಇಂಡಿಯಾ ಯೋಜನೆ ಪ್ರಾರಂಭವಾಗಿದ್ದರೂ ಅಂತರ್ಜಾಲವನ್ನು ಬಳಸುತ್ತಿರುವುದು ಕೇವಲ 30% ಭಾರತೀಯರು ಮಾತ್ರ. ಸ್ಮಾರ್ಟ್ ಪೋನ್ ಬಳಕೆದಾದರ ಸಂಖ್ಯೆ 17%. 

ಇಂತಹ ಸಂದಿಗ್ಧ ಸಂದರ್ಭದಲ್ಲಿ ನಗದುರಹಿತ ವ್ಯವಹಾರದ ವೃದ್ಧಿಗಾಗಿ ಡಿಜಿಟಲ್ ಜ್ಞಾನವಿರುವ ತಂತ್ರಜ್ಞಾನಿ ನಾಗರಿಕರು, ಸಂಘಸಂಸ್ಥೆಗಳು, ಮುಖ್ಯವಾಗಿ ಉನ್ನತ ಶಿಕ್ಷಣ ಕೇಂದ್ರಗಳು ವಿಮುದ್ರಿಕರಣದಿಂದ ರಚನಾತ್ಮಕವಾಗಿ ಪ್ರಧಾನ ನೆಲೆಗೆ ಬಂದಿರುವ ನೋಟುರಹಿತ ವ್ಯವಹಾರದ ಸಾಧ್ಯತೆ, ಸಾಕ್ಷರತೆಯನ್ನು, ನೋಟುಗಳ ಮೂಲಕವೆ ಎಲ್ಲಾ ವ್ಯವಹಾರ ಮಾಡುತ್ತಿರುವ ಜನರತ್ತ ವಿಸ್ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸರಕಾರದ ಯಾವುದೇ ಕ್ರಮ ಜನರ ಪಾಲ್ಗೊಳ್ಳುವಿಕೆಯ ಹೊರತು ನಿಶ್ಚಿತ ಯಶಸ್ಸನ್ನು ಸಾಧಿಸಲಾಗದು. ಇದನ್ನು ಮಾಡಬೇಕಾದ್ದು ಶಿಕ್ಷಣ ಕೇಂದ್ರಗಳ ಸಾಮಾಜಿಕ ಜವಾಬ್ದಾರಿಯೂ ಹೌದು.

ಶೈಕ್ಷಣಿಕ ವರ್ಷದ ಓದಿನ ಚಟುವಟಿಕೆಯ ಜೊತೆಗೆ ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯವರ್ಧನೆಯ ಚಟುವಟಿಕೆಗಳಲ್ಲೂ ಪಾಲ್ಗೊಂಡು ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿ ಕಾಣಬೇಕೆಂಬುದು ಯು.ಜಿ.ಸಿ.ಯ ಆಶಯವೂ ಕೂಡ. ಅದೇ ರೀತಿ ಈ ಕುರಿತು ನಡೆದಿರುವ ಅಧ್ಯಯನಗಳ ಪ್ರಕಾರ, ಉನ್ನತ ಶಿಕ್ಷಣ ಕೇಂದ್ರಗಳ ಶಿಕ್ಷಕರು-ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಅರಿವಿನ(ಕಾಗ್ನಿಟಿವ್) ಸಾಮಥ್ರ್ಯ ಹಾಗೂ ಭಾವನಾತ್ಮಕ(ಇಮೋಶನಲ್) ಲಬ್ಧತೆ ಹೆಚ್ಚು ಪರಿಣಾಮಕಾರಿಯಾಗಿದ್ದು ಹೆಚ್ಚು ಜವಾಬ್ದಾರಿಯುತ ಪ್ರಜೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ವಿಮುದ್ರಿಕರಣ ತನ್ನ ಯೋಚನೆ ಹಾಗೂ ಕ್ಷಿಪ್ರ ಜಾರಿಯಾಗುವಿಕೆಯಿಂದಲೇ ವಿಶೇಷವಾಗಿದೆ. ದೇಶದ ಭವಿಷ್ಯವನ್ನು ಬದಲಾಯಿಸಬಲ್ಲ, ಆರ್ಥಿಕತೆಗೆ ಹೊಸ ಆಯಾಮ ನೀಡಬಲ್ಲ ಈ ಬಗೆಯ ಯೋಜನೆಗಳು ಜಾರಿಯಾದಾಗ ನಮ್ಮ ಜ್ಞಾನ ಕೇಂದ್ರಗಳು ಅತ್ಯಂತ ಜವಾಬ್ದಾರಿಯುತ ಕರ್ತವ್ಯವನ್ನು ಸಕ್ರಿಯವಾಗಿ ನಿರ್ವಹಿಸಬೇಕಿವೆ. ಕಾರ್ಪೋರೇಟ್ ವಲಯಕ್ಕೆ ತಮ್ಮ ಲಾಭದ 2% ಮೊತ್ತವನ್ನು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸಬೇಕೆಂಬ ಕಡ್ಡಾಯ ನಿಯಮವಿದೆ. ಹೆಚ್ಚಿನ ಜ್ಞಾನಕೇಂದ್ರಗಳು ಸರಕಾರದಿಂದ ನೇರವಾಗಿಯೇ ಅಥವಾ ಅನುದಾನಗಳ ಮೂಲಕ ಪೋಷಿಸುತ್ತಿರುವ ಸಂಸ್ಥೆಗಳು. ಅವುಗಳ ಅಭಿವೃದ್ಧಿಗೆ ಜನರ ತೆರಿಗೆಯ ಹಣವೂ ಬಳಕೆಯಾಗುತ್ತದೆ. ಐ.ಐ.ಟಿ, ಐ.ಐ.ಎಂ, ವೃತ್ತಿ ಕೇಂದ್ರಿತ ಕೋರ್ಸ್‍ಗಳು, ಕೇಂದ್ರ, ರಾಜ್ಯ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳು ಹೀಗೆ ಒಟ್ಟಾರೆ ಉನ್ನತ ಶಿಕ್ಷಣ ಕೇಂದ್ರಗಳ ಸಾಮಾಜಿಕ ಬದ್ಧತೆಯೇನು?

ಉನ್ನತ ಶಿಕ್ಷಣ ಕೇಂದ್ರಗಳು ಇಂತಹ ಯೋಜನೆಯನ್ನು ಸ್ವಯಂಪ್ರೇರಿತರಾಗಿ ಯಶಸ್ವಿಯಾಗಿಸುವಲ್ಲಿಯೋ, ಡಿಜಿಟಲ್ ಸಾಕ್ಷರತೆಯನ್ನು ಜನರತ್ತ ವಿಸ್ತರಿಸುವತ್ತಲೋ, ಅಥವಾ ಸ್ವಚ್ಛಭಾರತದಂತಹ ಗುಣಾತ್ಮಕ ಯೋಜನೆಗಳಲ್ಲಿ ತಮ್ಮ ಅಧ್ಯಯನದ, ಜ್ಞಾನ ಶಾಖೆಯ ಶಿಸ್ತಿನ ಹಿನ್ನೆಲೆಯಲ್ಲಿಯೇ ತಮ್ಮ ಕರ್ತವ್ಯವನ್ನೇಕೆ ನಿರ್ವಹಿಸಬಾರದು? ತಮ್ಮ ಬಿಡುವಿನ ಸಮಯವನ್ನು ಮುಡಿಪಾಗಿಟ್ಟು ಶಿಕ್ಷಕರು-ವಿದ್ಯಾರ್ಥಿಗಳು ಇಂತಹ ಯೋಜನೆಗಳನ್ನು ಜನರತ್ತ ಕೊಂಡೊಯ್ಯಬೇಕು. ವಿಮುದ್ರಿಕರಣ ಯೋಜನೆಯ ಆಳ ಅರಿವನ್ನು ಅಧ್ಯಯನ ನಡೆಸುತ್ತಿರುವ ಅಧ್ಯಯನನಿರತರು ವಿಮುದ್ರಿಕರಣ ಯೋಜನೆಯನ್ನು ಸರಳೀಕೃತಗೊಳಿಸಿ ಜನರತ್ತ ಯಾಕೆ ಕೊಂಡೊಯ್ಯುತ್ತಿಲ್ಲ? ತಾವೇ ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವುದಕ್ಕಾಗಿ, ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಬಳಸುವುದು ಹೇಗೆ ಎಂಬ ಮಾಹಿತಿ ಪ್ರಸರಣವನ್ನೂ, ಪ್ರಾತ್ಯಕ್ಷಿಕೆಗಳನ್ನು ಮಾಡುವುದಿಲ್ಲವೇಕೆ? ಓದಿನ ನೆಲೆಯಲ್ಲಿ ಅಧ್ಯಯನಿಸುತ್ತಿರುವ ವಿದ್ಯಾರ್ಥಿ, ಸಂಶೋಧನಾರ್ಥಿಗಳಿಗೆ ಅವರ ಜ್ಞಾನವನ್ನು ಪ್ರಾಯೋಗಿಕ ನೆಲೆಗೆ ವಿಸ್ತರಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಡವೆ? ಇದು ಉನ್ನತ ಜ್ಞಾನ ಕೇಂದ್ರಗಳ ಸಾಮಾಜಿಕ ಬದ್ಧತೆಯ ಕಾರ್ಯ. ಇಲ್ಲಿ ಯಾರೂ ಪ್ರಾಧ್ಯಾಪಕರ ಗಳಿಕೆಯನ್ನೋ, ವಿದ್ಯಾರ್ಥಿಗಳ ಭವಿಷ್ಯದ ಗಳಿಕೆಯನ್ನೋ ಅಪೇಕ್ಷಿಸುತ್ತಿಲ್ಲ. ಬಯಸುತ್ತಿರುವುದು ಸಮಾಜಕ್ಕಾಗಿ ಕಾಳಜಿ, ಒಂದಷ್ಟು ಸಮಯ, ತಾವು ಕಲಿತ ವಾಸ್ತವಿಕ ಜ್ಞಾನದ ಪ್ರಸರಣೆ, ಆನ್ವಯಿಕತೆ ಅಷ್ಟೆ. 

ರುಪೆ, ಆಧಾರ್ ಆಧರಿತ ಪಾವತಿ, ಬ್ಯಾಂಕ್‍ಗಳ ಯುಪಿಐ, ಬೇಸಿಕ್ ಮೊಬೈಲ್ ಹ್ಯಾಂಡ್‍ಸೆಟ್‍ಗಳಿಂದ ವ್ಯವಹಾರ ನಡೆಸಬಲ್ಲ ಯುಎಸ್‍ಎಸ್‍ಡಿ, ಮೊಬೈಲ್ ವ್ಯಾಲೆಟ್‍ನಂತಹ ಹೊಸಕಾಲದ ಹೊಸ ಸಾಧ್ಯತೆಗಳ ಅರಿವು ನಗರಗಳಲ್ಲಿಯೇ ಕಡಿಮೆ ಪ್ರಮಾಣದಲ್ಲಿದೆ. ಅನೇಕ ಗ್ರಾಮೀಣರಿಗೆ ಇದರ ಬಗ್ಗೆ ಕೇಳಿಯೂ ಗೊತ್ತಿಲ್ಲ. ಇಂತಹ ಸೌಲಭ್ಯಗಳ ಪರಿಚಯ ಮಾಡಿಕೊಡಬೇಕಾದ್ದು ಶಿಕ್ಷಿತರ, ಅರ್ಥಶಾಸ್ತ್ರ, ವಾಣಿಜ್ಯ-ವ್ಯವಹಾರಶಾಸ್ತ್ರಗಳನ್ನು ಓದುತ್ತಿರುವವರ ಜವಾಬ್ದಾರಿಯಲ್ಲವೇ? ಐ.ಐ.ಟಿ., ಐ.ಐ.ಎಂ., ಅನೇಕ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ತಂತ್ರಜ್ಞಾನಗಳ ಉತ್ತಮ ಮಾಹಿತಿ ಹಾಗೂ ತಮ್ಮ ಕ್ಷೇತ್ರಗಳಲ್ಲಿ ಪರಿಣತಿಯಿರುತ್ತದೆ. ಅವುಗಳ ಆನ್ವಯಿಕತೆಯನ್ನು ಜನರಿಗೆ ತಲುಪಿಸಬೇಕಾದ್ದು ಶಿಕ್ಷಣ ಪಡೆಯುತ್ತಿರುವವರ ಕರ್ತವ್ಯ.

ವಿಜ್ಞಾನ, ತಂತ್ರಜ್ಞಾನ, ಸಮಾಜ ನಿಕಾಯದವರೂ ವಿಮುದ್ರಿಕರಣದ ಲಾಭಗಳನ್ನು ನಗದುರಹಿತ ವ್ಯವಹಾರದ ಸಾಧ್ಯತೆಗಳನ್ನು ಗ್ರಾಮಗಳಿಗೆ ವಿಸ್ತರಿಸಬೇಕು. ವ್ಯಾಪಾರ ಕೇಂದ್ರಗಳಿಗೆ, ಕೃಷಿ ಮಾರುಕಟ್ಟೆ, ವಾಣಿಜ್ಯ ಕೇಂದ್ರ, ಮಾರ್ಕೆಟ್ ಪ್ರದೇಶಗಳತ್ತ ತೆರಳಿ ಮೊಬೈಲ್ ವ್ಯಾಲೆಟ್, ಕಾರ್ಡ್ ಸ್ವೈಪ್ ಮಿಶನ್‍ಗಳನ್ನು ಬಳಸುವ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿ ನಗದುರಹಿತ ವ್ಯವಹಾರದ ಲಾಭ ಹಾಗೂ ಅದರ ಬಗ್ಗೆ ಜನರಿಗಿರುವ ಗೊಂದಲಗಳನ್ನು ನಿವಾರಿಸುವ ಪ್ರಯತ್ನವಾಗಿ ಜನಸಾಮಾನ್ಯರಿಗೆ ಡಿಜಿಟಲ್ ಶಿಕ್ಷಣವನ್ನು ನೀಡಬೇಕಿದೆ. ಎನ್.ಸಿ.ಸಿ., ಎನ್.ಎಸ್.ಎಸ್., ರೋವರ್ಸ್ ರೇಂಜರ್ಸ್, ಕಾಲೇಜು ವಿದ್ಯಾರ್ಥಿ ಸಂಘದಂತಹ ದೇಶಸೇವೆಗೆ ಸಿದ್ಧವಿರುವ ವಿದ್ಯಾರ್ಥಿ ಸಂಘಟನೆಗಳು ಕಾರ್ಯಪ್ರವೃತ್ತರಾಗಿ ಆಸಕ್ತ ವಿದ್ಯಾರ್ಥಿಗಳನ್ನು ಜೊತೆಯಲ್ಲಿ ಕರೆದುಕೊಂಡು ಈ ರೀತಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿವೆ.

ಮೌಲ್ಯಯುತ ಯೋಜನೆಗಳ ಆಳ ಅರಿವು, ದೂರದೃಷ್ಟಿತ್ವವನ್ನು ಪದವಿ, ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಧ್ಯಾಪಕ ವೃಂದ ಅರಿತು, ತಮ್ಮ ನಾಯಕತ್ವದಲ್ಲಿ ವಿದ್ಯಾರ್ಥಿಗಳನ್ನು ಮುನ್ನಡೆಸಬೇಕು. ಅದು ಏಕತಾನತೆಯ, ಹಳತಾದ ಸ್ಥಿರ ಜ್ಞಾನದ ಪರಿಮಿತಿಯಿಂದ ತಮ್ಮನ್ನು ತಾವು ಒರೆಗೆ ಹಚ್ಚಿಕೊಂಡು ವರ್ತಮಾನದ ಸವಾಲುಗಳಿಗೆ ಸ್ಪಂದಿಸುವ ಆ ಮೂಲಕ ತಾವೂ ಸಮಾಜದೊಂದಿಗೆ ಬೆರೆತು ಬೆಳೆಯುವ ಅವಕಾಶವೊಂದನ್ನು ಪ್ರಾಧ್ಯಾಪಕವರ್ಗ ಹಾಗೂ ವಿದ್ಯಾರ್ಥಿವರ್ಗ ಯಾಕೆ ನಿರ್ಮಿಸಿಕೊಳ್ಳಬಾರದು? ವಿದ್ಯಾರ್ಥಿಗಳಿಗೆ ಅದೇ ಹಳೆಯ ಉರುಹೊಡೆಯುವ; ಬೇರೆ ಮೂಲಗಳಿಂದ ಹುಡುಕಿ ಬರೆಯುವ ಸೆಮಿನಾರ್, ಅಸೈಮ್ನೆಂಟ್‍ಗಳಿಗಷ್ಟೇ ಸೀಮಿತಗೊಳಿಸುವ ಬದಲು ಸಮಾಜವೆಂಬ ಬೃಹತ್ ಪ್ರಯೋಗಶಾಲೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನವನ್ನು ಅನುಷ್ಟಾನಗೊಳಿಸಲು ವಾಸ್ತವ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಶಿಕ್ಷಣ ಕೇಂದ್ರಗಳ ಆಸುಪಾಸಿನ ಗ್ರಾಮ, ಊರು ಅಥವಾ ಮಾರುಕಟ್ಟೆಗಳನ್ನು ಕೇಂದ್ರವಾಗಿಸಿಕೊಂಡು ತಮ್ಮ ಸಾಮಾಜಿಕ ಸೇವೆಯನ್ನು, ಸಾಂಸ್ಕøತಿಕ ಕ್ರಾಂತಿಯನ್ನು ಮುಂದುವರೆಸಬೇಕಿವೆ. ಇಂತಹ ಕ್ರಿಯಾತ್ಮಕ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು, ಕ್ರೆಡಿಟ್‍ಗಳನ್ನು ನೀಡಬೇಕು. 

ಉನ್ನತ ಶಿಕ್ಷಣ ಕೇಂದ್ರಗಳು "ವಿಮುದ್ರಿಕರಣ"ದ ವಿವಿಧ ಆಯಾಮಗಳನ್ನು ಅರಿಯುವ ವಿಚಾರ ಸಂಕಿರಣಗಳಿಗಷ್ಟೇ ಸೀಮಿತಗೊಳ್ಳದೆ ಅದನ್ನು ಜನರತ್ತ ಕೊಂಡೊಯ್ಯುವ ಸ್ವಯಂಪೂರ್ಣ ಕಳಕಳಿಯ ಕೆಲಸವನ್ನೇಕೆ ಮಾಡಬಾರದು? ಶಿಕ್ಷಣ ಕೇಂದ್ರಗಳು ಯು.ಜಿ.ಸಿ., ಮಾನವ ಸಂಪನ್ಮೂಲ ಸಚಿವಾಲಯಗಳ ಆದೇಶಕ್ಕೆ ಕಾಯುವ ಬದಲು ಇಂತಹ ವಿನೂತನವಾದ ಆದರೆ ಅಷ್ಟೇ ಶಕ್ತಿಯುತ, ದಿನನಿತ್ಯದ ಪಠ್ಯಕ್ರಮಕ್ಕಿಂತ ಭಿನ್ನವಾದ ಯೋಜನೆಯೊಂದನ್ನು ವಿಭಾಗಗಳ ಮೂಲಕ ರೂಪಿಸಬಾರದೇಕೆ?

ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ತಾವೇಕೆ ಈ ವಿತ್ತೀಯ ಸಾಕ್ಷರತೆಯ ರಾಜಕಾರಣದಲ್ಲಿ ಬೀಳಬೇಕೆಂಬ ಗೊಂದಲವಿರಬಹುದು. ವಿಶ್ವದ ಆರ್ಥಿಕತೆ ಹಳ್ಳಹಿಡಿದಿದ್ದರೂ ಭಾರತದ ಆರ್ಥಿಕ ಸ್ಥಿತಿ ಮಾತ್ರ ಆರೋಗ್ಯಕರವಾಗಿರುವ ಈ ಸುಸಮಯದಲ್ಲಿ ವಿಮುದ್ರಿಕರಣ ಜಾರಿಗೊಳಿಸಿದ್ದು. ಇದರಿಂದ ಭವಿಷ್ಯದಲ್ಲಿ ದೇಶಕ್ಕೆ, ದೇಶವಾಸಿಗಳಿಗೆ ಸಹಾಯವಾಗಲಿದೆ. ಇದನ್ನು ಕೇವಲ ಮೋದಿಯವರ ಯೋಜನೆ ಎಂಬುದಾಗಿ ಮಾಡಿದ್ದು ನಮ್ಮ ಸಣ್ಣತನ. ಅದು ದೇಶದ ಯೋಜನೆ. ಆಧಾರ್ ಕಾರ್ಡ್ ಯೋಜನೆಯನ್ನು ಹಿಂದಿನ ಸರಕಾರವೇ ಜಾರಿಗೆ ತಂದಿದ್ದರೂ ಭವಿಷ್ಯದಲ್ಲೂ ಅದು ಅನೇಕ ಸೌಲಭ್ಯಗಳನ್ನು ಪಡೆಯುವುದಕ್ಕೆ ಅಗತ್ಯ ಮಾನದಂಡವಾಗಿರಲಿದೆ. ವಿಮುದ್ರಿಕರಣ ಯೋಜನೆಯ ಬಗ್ಗೆ ಅನೇಕರಲ್ಲಿ ಅಸಮಧಾನವಿರಬಹುದು. ತಪ್ಪೇನಿಲ್ಲ. ಆದರೆ ಭಾರತವನ್ನು ಕಡಿಮೆನೋಟು ಆರ್ಥಿಕತೆಯನ್ನಾಗಿ ರೂಪಿಸಲು ಹಳ್ಳಿಗರಿಗೆ, ಶ್ರೀಸಾಮಾನ್ಯರಿಗೆ, ಡಿಜಿಟಲ್ ಶಿಕ್ಷಣ ನೀಡುವುದಕ್ಕೆ, ಪಾರದರ್ಶಕ ವ್ಯವಹಾರವನ್ನು ರೂಪಿಸಿ ದೇಶದ ಚಿತ್ರಣವನ್ನೇ ಬದಲಾಯಿಸಬೇಕೆಂಬುದನ್ನು ಎಲ್ಲ ಆರ್ಥಿಕ ತಜ್ಞರೂ ಬಯಸುತ್ತಾರೆ. ಹಾಗಿದ್ದಾಗ ಜನರನ್ನು ವಿತ್ತೀಯ ಸಾಕ್ಷರಸ್ಥರನ್ನಾಗಿ ಮಾಡುವ ಉತ್ತಮ ಯೋಚನೆಯ ಬಗ್ಗೆ ಅಸಮಧಾನ ಪಡುವುದರಲ್ಲಿ ಅರ್ಥವಿಲ್ಲ. 

ಡಿಜಿಟಲ್ ವ್ಯವಹಾರಕ್ಕೆ ವಿಮುದ್ರಿಕರಣ ಯೋಜನೆ ಕಾರಣವಷ್ಟೆ. ಶಿಕ್ಷಕರು, ವಿದ್ಯಾರ್ಥಿಗಳು ಡಿಜಿಟಲ್ ಸಾಕ್ಷರತೆಯ ಪ್ರಸರಣದ ಕರ್ತವ್ಯ ನಿರ್ವಹಿಸುವುದರಿಂದ ಅಭಿವೃದ್ಧಿಹೊಂದಿದ ದೇಶಗಳಂತೆ ನಗದುರಹಿತ ಆರ್ಥಿಕತೆಯಾಗಿ ರೂಪುಗೊಂಡು ತೆರಿಗೆ ವಂಚನೆಯಂತಹ ಅನೇಕ ನ್ಯೂನತೆಗಳ ನಿವಾರಣೆಯಾಗುತ್ತದೆ. ಭಾರತದ ಸ್ವಸ್ಥ ಆರ್ಥಿಕತೆಯ ದೃಷ್ಟಿಯಿಂದ ಇದೊಂದು ಉತ್ತಮ ನಡೆ. ಇಂತಹ ಚಟುವಟಿಕೆಗಳಿಂದ ಕಲಿಯಬಹುದಾದ ಜೀವನ ಪಾಠ, ಸಾಮಾಜಿಕ ಮೌಲ್ಯಗಳು, ಸಮಾಜದೊಂದಿಗೆ ಬೆರೆತು ಸಮಾಜವನ್ನು ಅರಿಯುವ ಅವಕಾಶ, ಕೀಳರಿಮೆಯನ್ನು ದೂರವಾಗಿಸಿ ಆತ್ಮವಿಶ್ವಾಸ ತುಂಬುವ ನಾಯಕತ್ವ ಗುಣ, ಸಾಮಾಜಿಕ ಸ್ಪಂದನೆ, ಸಮಾಜದಲ್ಲಿ ವ್ಯವಹರಿಸುವ, ಸಂವಹನ ನಡೆಸುವ ಕಲೆ, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಹಾಗೂ ಅವರನ್ನು ತಳಸ್ಪರ್ಶಿಗೊಳಿಸಿ, ಮನುಷ್ಯ ಮೌಲ್ಯಗಳನ್ನು ಬೆಳೆಸುವ ಪ್ರಯತ್ನವಾಗುವುದಿಲ್ಲವೆ? ಇದು ಪರಸ್ಪರ ಏಳಿಗೆಯ ಮಾರ್ಗವಲ್ಲವೆ?ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿರುವ ರಾಜ್ಯಶಾಸ್ತ್ರ ಪ್ರಾಧ್ಯಾಪಕ, ಕೆ.ಎಸ್. ಮೋಹನ್‍ನಾರಾಯಣರ "ಸಾಮಾಜಿಕ ಪ್ರಯೋಗಾಲಯ"ವೆಂಬ ಪ್ರಯೋಗಶೀಲತೆಯನ್ನು ತಿಳಿಸಲೇಬೇಕು. ವಿದ್ಯಾರ್ಥಿಗಳನ್ನು ಕೇವಲ ಪಠ್ಯದ ಓದಿಗೆ ಸೀಮಿತಗೊಳಿಸದೆ ತಾವು ಓದುವ ಗ್ರಾಮ ಸ್ವರಾಜ್, ಪಂಚಾಯತಿ ಸಬಲೀಕರಣ, ಸ್ತ್ರೀ ಸಶಕ್ತೀಕರಣ, ಸಂವಿಧಾನದ ಆನ್ವಯಿಕತೆ, ಮತದಾನದ ಜಾಗೃತಿ, ಸ್ವಸಹಾಯ ಸಂಘಗಳ ಸಬಲೀಕರಣದಂತಹ ಬಹುಮುಖ್ಯ ವಿಚಾರಗಳನ್ನು ವಿದ್ಯಾರ್ಥಿಗಳ ಮೂಲಕ ಜನರತ್ತ ಕೊಂಡೊಯ್ದು ಜನರನ್ನು ಜಾಗೃತಗೊಳಿಸುವ ಪ್ರಯತ್ನ ವಿಶಿಷ್ಟವಾದದ್ದು. ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಾಮಾಜಿಕತ್ವ ಗುಣಗಳ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ಇತ್ತೀಚೆಗೆ ರಾಷ್ಟ್ರಪತಿಯವರು "ನಮ್ಮ ಉನ್ನತ ಶಿಕ್ಷಣ ಕೇಂದ್ರಗಳು ಉದ್ಯೋಗಿಗಳನ್ನು ನಿರ್ಮಿಸುವ ಬದಲು ಯುವ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿವೆ. ಉದ್ಯೋಗಕ್ಕೆ ಬೇಕಾದ ಕೌಶಲ್ಯವನ್ನು ನೀಡಲು ಶಿಕ್ಷಣ ಕೇಂದ್ರಗಳು ಸೋಲುತ್ತಿವೆ" ಎಂದಿದ್ದಾರೆ. ಅಂದರೆ ನಮ್ಮ ಜ್ಞಾನ ಕೇಂದ್ರಗಳು ಕೇವಲ ಮಾಹಿತಿ ಪ್ರಸರಣೆಯ ಶಿಕ್ಷಣ ಕೇಂದ್ರಗಳಾಗುತ್ತಿವೆಯೆ ಹೊರತು ಪ್ರಾಯೋಗಿಕ ಅನಿವಾರ್ಯತೆಗೆ ಉತ್ತರಿಸುವ ಕಲಿಕಾಶಾಲೆಗಳಾಗುತ್ತಿಲ್ಲ.

ಸರಕಾರದ ಯೋಜನೆ ಬಂದಾಗ ಅದರ ಆಶಯ, ಕಾರ್ಯನಿರ್ವಹಣೆಯ ಹಿನ್ನೆಲೆಯಲ್ಲಿ ಪರ ವಿರೋಧ ರೂಪುಗೊಳ್ಳುವುದು ಸಹಜ. ಆದರೀಗ ಯೋಜನೆಗಳನ್ನು ಯಾರು ತರುತ್ತಿದ್ದಾರೆಂಬುದರ ಮೇಲೆ ಯೋಜನೆಗೆ ಬೆಂಬಲ ಅಥವಾ ನಿರಾಕರಣೆಯ ಧೋರಣೆ ರೂಪುಗೊಳ್ಳುತ್ತಿದೆ. ಇದು ಬೌದ್ಧಿಕ ರಾಜಕಾರಣ. ಹಾಗಾಗಿಯೇ ಅನೇಕರು ವಿಮುದ್ರಿಕರಣ ಯೋಜನೆಯನ್ನು ವಿರೋಧಿಸುತ್ತಿರುವುದು, ಜ್ಞಾನಕೇಂದ್ರಗಳಲ್ಲಿ ಸಿದ್ಧಾಂತಗಳಿಗೆ ಜೋತುಬಿದ್ದು ಇಡೀ ಯೋಜನೆಯಲ್ಲಿರುವ ಮೌಲ್ಯಾತ್ಮಕ ಸಂಗತಿಗಳನ್ನು ಕಾಣದ ಮನಸ್ಥಿತಿ ರೂಪಿಸಿಕೊಂಡಿರುವುದು.

ಸಾಮಾನ್ಯವಾಗಿ ಅರ್ಥಶಾಸ್ತ್ರಜ್ಞರು ಚೌಕಟ್ಟಿನ ಆಚೆ ಯೋಚಿಸುವುದಿಲ್ಲ. ಆರ್ಥಿಕತೆಯಲ್ಲಿ ಎಲ್ಲವೂ ಹೀಗೆಯೇ ಆಗುತ್ತದೆ ಎಂದು ಭವಿಷ್ಯ ನುಡಿಯಲು(ಪ್ರಿಡಿಕ್ಶನ್) ಸಾಧ್ಯವಿಲ್ಲ. ಆದರೆ ಹೀಗಾಗಬಹುದು ಎಂದು ಊಹಿಸಬಹುದು. ಹೊಸರೀತಿಯಲ್ಲಿ ಜಾರಿಗೊಂಡ ಈ ಯೋಜನೆಯ ಕುರಿತು ಅನೇಕ ಆರ್ಥಿಕ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಬೃಹತ್ ದೇಶಕ್ಕೆ ಈ ರೀತಿ ಚಿಕಿತ್ಸಕವಾಗಿ ಸ್ಥಾಪಿತ ವ್ಯವಸ್ಥೆ ಬುಡಮೇಲು ಮಾಡುವ ಯೋಜನೆ ಜಾರಿ ಮಾಡಬಹುದೆಂದು ಅವರೆಲ್ಲ ಊಹಿಸಿರಲಿಲ್ಲ. ಅದೇ ಮನಸ್ಥಿತಿ ಜ್ಞಾನಕೇಂದ್ರಗಳಲ್ಲಿಯೂ ನೆಲೆಗೊಂಡಿದೆ. ತಾವೇ ಹೇರಿಕೊಳ್ಳುತ್ತಿರುವ ಸಂಕೀರ್ಣತೆಗಳನ್ನು ನಿವಾರಿಸಿಕೊಂಡು ಜ್ಞಾನಕೇಂದ್ರಗಳು ಮುನ್ನಡೆಯಬೇಕಿವೆ.

ಶಿಕ್ಷಣ ಕೇಂದ್ರಗಳು ಅಪ್ರತಿಮ ಸಾಮಥ್ರ್ಯವಿರುವ ಉತ್ಸಾಹಿ ವಿದ್ಯಾರ್ಥಿಗಣದ ಸಹಾಯದಿಂದ, ಅವರಲ್ಲಿರುವ ಗುಣಾತ್ಮಕ ಬೌದ್ಧಿಕ ಶಕ್ತಿ, ಅದ್ವಿತೀಯ ಕೌಶಲ್ಯಗಳ ನೆರವಿನಿಂದ ಹಾಗೂ ಸರಿಸಾಟಿಯಿಲ್ಲದ ಶಿಕ್ಷಕರ ಮಾರ್ಗದರ್ಶನದಿಂದ ತಮ್ಮ ಕಲಿಕೆಯ ಒಂದಂಶವನ್ನು ವಿದ್ಯಾರ್ಥಿಗಳಿರುವಾಗಲೇ ಸಮಾಜದ ಏಳಿಗೆ, ಅಭಿವೃದ್ಧಿಗೂ ವಿನಿಯೋಗಿಸುವ ಅನಿವಾರ್ಯತೆಯಿದೆ. ಭಾರತವನ್ನು ವಿತ್ತೀಯ ಹಾಗೂ ಡಿಜಿಟಲ್ ಸಾಕ್ಷರಸ್ಥಗೊಳಿಸಲು ತಮ್ಮ ಪ್ರದೇಶಗಳಲ್ಲಿಯೇ ಅಂತಹ ಸಣ್ಣ ಪ್ರಯತ್ನಗಳ ಮೂಲಕ ನೋಟುರಹಿತ ವಿತ್ತ ಕ್ರಾಂತಿಗೆ ನಾಂದಿಹಾಡುವ ಮಹತ್ವದ ಪಾತ್ರವಹಿಸಬೇಕಿವೆ. ಜ್ಞಾನಕೇಂದ್ರಗಳು ಪರಿಸರದ ಅಗತ್ಯಗಳಿಗುಣವಾಗಿ ಸಾಮಾಜಿಕ ಬದ್ಧತೆಯ ಕಾರ್ಯಗಳನ್ನು ಕಾಲದಿಂದ ಕಾಲಕ್ಕೆ ಕೈಗೆತ್ತಿಕೊಂಡು ಸಾಮಾಜಿಕ ಪರಿವರ್ತನೆಗೆ ಕಾರಣವಾಗಬೇಕು. ಭಾರತದ ಆರ್ಥಿಕತೆಯನ್ನು ಯಶಸ್ವಿ ಡಿಜಿಟಲ್ ಆರ್ಥಿಕತೆಯನ್ನಾಗಿ ಅಭಿವೃದ್ಧಿಪಡಿಸಿ, ಎಲ್ಲರೂ ಸಮಾನವಾಗಿ ಬಳಸುವಂತೆ ವ್ಯವಸ್ಥೆಯನ್ನು ಸಕ್ಷಮಗೊಳಿಸುವ ಸವಾಲು ಹಾಗೂ ಜವಾಬ್ದಾರಿ ಶಿಕ್ಷಣ ಸಮುದಾಯದ ಮೇಲಿದೆ.

-ಶ್ರೇಯಾಂಕ ಎಸ್ ರಾನಡೆ.

Wednesday, December 7, 2016

ಜಯಲಲಿತಾರನ್ನು ಚಿರಸ್ಮರಣೀಯವಾಗಿಸಿದ "ಅಮ್ಮ ಉನವಾಗಮ್".

Namaste,

The late, Selvi J Jayalalitha is and was a Mother figure to millions in Tamil Nadu. Apart from politics, she is so popular because of her social welfare schemes. Former CM Jayalalitha’s one such pilot scheme Amma Unavagam was launched in Feb 2013. The understanding of Food subsidy to Food security. It proved to be game changer among other welfare measures undertaken via Amma umbrella. 

194.6 million Indians go hungry every day in India. But there is a minute yet watermark silver lining to this issue with schemes like Amma Unavagam. Considering all the facts and analysis, I conclude (surplus) state sponsored food subsidy schemes can go a long way in overcoming hunger and malnutrition of the country. When purchasing power parity is very low vis-à-vis inflation and poverty; Idly for a rupee, Pongal for three rupees, A staple meal for five rupees is not just popular but insightful and productive. Even though a critic of politics of freebie schemes, Read(in the article) how I understand Amma schemes and Amma’s regime, And Unforgettable Amma for her stewardship and social welfare schemes.

This article is also an attempt to understand Amma through Amma schemes. Amma beyond her dictatorial, political, vendetta and popular self-centred persona.

Condolences to a Indian political stalwart. May her soul rest in peace.

--


ಜಯಲಲಿತಾರನ್ನು ಚಿರಸ್ಮರಣೀಯವಾಗಿಸಿದ "ಅಮ್ಮ ಉನವಾಗಮ್".


||ವಿಶ್ವಸಂಸ್ಥೆಯ ಅಂಗಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆಯ ಇತ್ತೀಚಿನ "ವಿಶ್ವದ ಆಹಾರ ಅಭದ್ರತೆಯ ಪರಿಸ್ಥಿತಿ 2015"ರ ವರದಿಯ ಪ್ರಕಾರ ಭಾರತದಲ್ಲಿ ದಿನನಿತ್ಯ 19.46 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ನಗರೀಕರಣಗೊಳ್ಳುತ್ತಿರುವ ದೇಶ. ಹಾಗಾಗಿ ಸರಿಯಾದ ಯೋಜನೆ ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಹೊರತು ನಗರೀಕರಣಗೊಂಡಂತೆಲ್ಲ ನಿರಾಶ್ರಿತರ, ಬಡವರ, ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಲಿದೆ. ತಕ್ಷಣದ ಪರಿಸ್ಥಿತಿಯಿಂದ ನೋಡಿದರೆ ಸರಕಾರಗಳ ಕಡಿಮೆ ಮೊತ್ತದ ಆದರೆ ಉತ್ತಮ ಗುಣಮಟ್ಟದ 'ಅಮ್ಮ ಮೆಸ್'ನಂತಹ ಆಹಾರ ಪೂರೈಸುವ ಯೋಜನೆಗಳು ಈ ದೇಶದ ಹಸಿವು ಹಾಗೂ ಪೌಷ್ಟಿಕತೆಯ ಕೊರತೆಯನ್ನು ನೀಗಿಸಿ ದೇಶವನ್ನು ಮತ್ತಷ್ಟು ಉತ್ಪಾದಕಗೊಳಿಸಲು ಸಹಾಯ ಮಾಡುತ್ತವೆ.||

ಅಮ್ಮ ಜೊತೆಗಿಲ್ಲ. ಆದರೆ ಹಸಿದವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಆಹಾರ ನೀಡುವ ರಾಜಕೀಯ ಹಾಗೂ ಮಮತೆಯ ನಿರ್ಧಾರ ಜನರಿಗೆ ಉಳಿದಿದೆ. ಜಯಲಲಿತಾ ಸಾವಿನಿಂದ ಚೆನೈ ಸಂಪೂರ್ಣ ಬಂದ್ ಆಗಿದ್ದರೂ ಅಮ್ಮ ಮೆಸ್‍ಗಳು ಅಮ್ಮನ ನೆನೆಪಿನಲ್ಲಿ ಚೊಕ್ಕವಾಗಿ ಕಾರ್ಯನಿರ್ವಹಿಸುತ್ತಿವೆ. ಯಾವುದೋ ರಾಜಕೀಯ ಸಮಾವೇಷಗಳಿಗೆ ಜನರನ್ನು ಕರೆತಂದಾಗ ಒಂದು ಹೊತ್ತಿಗೆ ತಯಾರಾದ ಆಹಾರದ ವ್ಯವಸ್ಥೆಯಲ್ಲಿ ಏರುಪೇರಾಗುವ ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ, ತನ್ನ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಅಮ್ಮಾ ಕ್ಯಾಂಟೀನ್‍ಗಳಿಂದ ದೇಶದ ಕಳಪೆ ಗುಣಮಟ್ಟದ ಬಿಸಿಯೂಟ ಕೇಂದ್ರಗಳು ಕಲಿಯುವುದು ಸಾಕಷ್ಟಿದೆ. ಯಾಕೆಂದರೆ ಪ್ರತೀ ತಟ್ಟೆ ಆಹಾರಕ್ಕೆ ತಗಲುವ ತೌಲನಿಕ ವೆಚ್ಚವನ್ನು ಗಮನಿಸಿದಾಗ ಹೆಚ್ಚು ಕಡಿಮೆ ಎರಡೂ ಯೋಜನೆಗಳಿಗೂ ವೆಚ್ಚದಲ್ಲಿ ಮಹತ್ವದ ವ್ಯತ್ಯಾಸವಿಲ್ಲ. ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಪ್ರತೀ ತಟ್ಟೆ ಊಟಕ್ಕೆ ತಗಲುವ ವೆಚ್ಚ 3.11-4.65 ರೂಪಾಯಿಗಳು, ಅದೇ ಅಮ್ಮ ಮೆಸ್‍ಗಳಲ್ಲಿ ಅಗತ್ಯ ಪೌಷ್ಟಿಕಾಂಶದಿಂದ ಕೂಡಿರುವ ಸುಸಜ್ಜಿತ ಹಾಗೂ ಸುರಕ್ಷಿತ ಊಟಕ್ಕೆ ತಗಲುವ ವೆಚ್ಚ 5 ರೂಪಾಯಿಗಳು ಮಾತ್ರ. ಜನಪರ ಯೋಜನೆಯೊಂದನ್ನು ಹೇಗೆ ಜನಸ್ನೇಹಿಗೊಳಿಸಬಹುದೆಂಬುದಕ್ಕೆ ಉದಾಹರಣೆ ಅಮ್ಮ ಉನವಾಗಮ್ ಯೋಜನೆ ಅಥವಾ ತಮಿಳುನಾಡಿನಲ್ಲಿ ಪ್ರಖ್ಯಾತಿ ಪಡೆದಿರುವ ಅಮ್ಮ ಕ್ಯಾಂಟೀನ್‍ಗಳು.

ಉಪ್ಪು, ನೀರು, ವಿದ್ಯುತ್, ಫ್ಯಾನ್, ಸಿಮೆಂಟ್, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಮಹಿಳೆಯರಿಗೆ ದ್ವಿಚಕ್ರವಾಹನ ಕೊಳ್ಳಲು 50% ಸಬ್ಸಿಡಿ, ಮೊಬೈಲ್, ಔಷಧಿ, ನವಜಾತ ಶಿಶುಗಳಿಗೆ ಬೇಬಿ ಕೇರ್ ಕಿಟ್, ಹಾಲು ನೀಡುವ ಹಸು, ಆಡುಗಳು.. ಹೀಗೆ ಹುಟ್ಟಿನಿಂದ ಸಾಯುವವರೆಗೆ ಜನಸಾಮಾನ್ಯರಿಗೆ ಏನು ಬೇಕೋ ಅದನ್ನೆಲ್ಲ "ಅಮ್ಮ" ಯೋಜನೆಯಡಿ ಮುಕ್ತವಾಗಿ ಒದಗಿಸಿ ಕೆಲವೊಮ್ಮೆ ಜನರನ್ನು ಸರಕಾರದ ಫಲಾನುಭವಕ್ಕಷ್ಟೇ ಸೀಮಿತಗೊಳಿಸಿ ಅವರನ್ನು ಹಾಗೇ ಬಡವರಾಗಿ ಉಳಿಸಿ, ಅವರಿಂದ ವೋಟುಗಳನ್ನು ಪಡೆಯುತ್ತಾ ಪ್ರತ್ಯಕ್ಷ ಯೋಜನೆಗಳ ಹೆಸರಿನಲ್ಲಿ ಪರೋಕ್ಷ ಲಂಚನೀಡುತ್ತಾ, ಇನ್ನೂ ಕೆಲವೊಮ್ಮೆ ಕೊಟ್ಟಿದ್ದು ಸಾಲದೆನಿಸಿ ಮುಂದಿನ ಚುನಾವಣೆಯ ಮುನ್ನ ಬಡವರ ಹೆಸರಿನಲ್ಲಿ ಇನ್ನೂ ಅನೇಕಾನೇಕ ಯೋಜನೆಗಳ ಜಾರಿ. ಎಷ್ಟರ ಮಟ್ಟಿಗೆಂದರೆ ದೇಶದ ಪ್ರತೀ ರಾಜ್ಯದಲ್ಲೂ ಕೊಡುವುದರಲ್ಲಿ ತಮಿಳುನಾಡನ್ನು ನೋಡಿ ಕಲಿಯಬೇಕು, ಕೊಟ್ಟರೆ ತಮಿಳುನಾಡಿನ ಅಮ್ಮನಂತೆ ಕೊಡಬೇಕು ಎಂಬಷ್ಟರ ಮಟ್ಟಿಗೆ ಜನರಿಗೆ ಉಚಿತ ಸೌಲಭ್ಯಗಳನ್ನು ಜನಪ್ರಿಯವಾಗಿ ಹಾಗೂ ಯಶಸ್ವಿಯಾಗಿ ಜಯಲಲಿತ ಜಾರಿಗೊಳಿಸಿದ್ದರು. ಈ ಕ್ರಮದಿಂದ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವಾಗುತ್ತಿದ್ದರೂ ಬಡಜನರ ಪಾಲಿಗೆ ಯಾವುದರಲ್ಲೂ ಕಮ್ಮಿಯಾಗಬಾರದೆಂಬ ಧೋರಣೆ ಹೊಸ ಯೋಜನೆಗಳ ಅನುಷ್ಠಾನಗಳ ರಾಜಕೀಯ ಆನ್ವಯಿಕತೆಯಲ್ಲಿರುತ್ತಿತ್ತು. ಅದು ಹೇಗೆಂದರೆ ತಾಯಿ ತನಗಿಲ್ಲದಿದ್ದರೂ ತನ್ನ ಮಕ್ಕಳಿಗೆ ಹೊಟ್ಟೆ ತುಂಬ ಬಡಿಸುವುದಿಲ್ಲವೆ? ಅಲ್ಲಿ ಅಮ್ಮ ಊಟಮಾಡಿಸುವುದು ತನ್ನ ಹೊಟ್ಟೆ ಹೊರೆದು. ಆದರೆ ಇಲ್ಲಿನ ಅಮ್ಮ ತುಂಬಾ ಜಾಣೆ. ತಾನೂ ಹಸಿವಿನಿಂದ ಬಳಲದೆ, ಜನರಿಗೂ ಚೆನ್ನಾಗಿ ಊಟಮಾಡಿಸಿ ನಷ್ಟವನ್ನು ರಾಜ್ಯದ ಬೊಕ್ಕಸದ ಬಾಯಿಗೆ ಒರೆಸಿದರು. ಆದರೆ ಅದರಿಂದ ಬರುವ ಜನರ ಪ್ರೀತಿ, ವಿಶ್ವಾಸವೆಂಬ ರಾಜಕೀಯ ಲಾಭವನ್ನು ನೇರವಾಗಿ ಪಡೆದರು.

1 ರೂಪಾಯಿಗೆ ಒಂದು ಇಡ್ಲಿ, 1 ರೂಪಾಯಿಗೆ ಒಂದು ಪ್ಲೇಟ್ ಪೊಂಗಲ್, 3 ರೂಪಾಯಿಗೆ ಎರಡು ಚಪಾತಿ ಮತ್ತು ದಾಲ್; 5 ರೂಪಾಯಿಗೆ ಅನ್ನ ಸಾಂಬಾರ್, ಚಿತ್ರಾನ್ನ ಹಾಗೂ ಮೊಸರಾನ್ನ ಒಳಗೊಂಡ ಹೊಟ್ಟೆತುಂಬುವ ಊಟ. ಇದು ಪಾರ್ಲಿಮೆಂಟ್ ಕ್ಯಾಂಟೀನ್‍ನ ದರಪಟ್ಟಿಯಲ್ಲ. ತಮಿಳುನಾಡಿನ ಎಲ್ಲ ವರ್ಗದ ಜನರಿಗೂ ತೆರೆದುಕೊಂಡ ಅಮ್ಮ ಕ್ಯಾಂಟೀನ್‍ನಲ್ಲಿ ದೊರೆಯುವ ಶುಚಿ-ರುಚಿ ಆಹಾರದ ದರ ವಿವರ. ಇದು ರಸ್ತೆಬದಿಯ ತಳ್ಳುಗಾಡಿಯ ದರಕ್ಕಿಂತಲೂ ಕಡಿಮೆ. ತಿಂಗಳಿಗೆ ಎರಡರಿಂದ ಮೂರು ಬಾರಿ ಆಹಾರ ಇಲಾಖೆಯ ಅಧಿಕಾರಿಗಳಿಂದ ಗುಣಮಟ್ಟದ ಪರೀಕ್ಷೆ ಹಾಗೂ ಅಮ್ಮ ಕ್ಯಾಂಟೀನ್‍ಗಳ ತಪಾಸಣೆ. ಶುಭ್ರವಾದ ನೆಲ, ಗೋಡೆಗಳು. ಸ್ವಚ್ಛ ಪಾತ್ರೆಗಳು ಮತ್ತು ಆವರಣ. ಆಹಾರ ತಯಾರಿಕೆ ಮತ್ತು ಬಡಿಸುವಿಕೆಯಲ್ಲಿ ವ್ಯವಸ್ಥಿತ ತಯಾರಿ. ಜೇಬು ತುಂಬಿರುವವರಿಗೂ, ಕೈಯಲ್ಲಿ ಚಿಲ್ಲರೆಯಿರುವವರಿಗೂ ತರತಮವಿಲ್ಲದಂತೆ ಸಲ್ಲುವ ಒಂದೇ ಗುಣಮಟ್ಟದ ಆಹಾರ. ಬಿಹಾರ, ಒರಿಸ್ಸಾ, ಪೂರ್ವಾಂಚಲ ರಾಜ್ಯಗಳಿಂದ ವಲಸೆ ಬಂದ ಬಡ ಕೂಲಿ ಕಾರ್ಮಿಕರಿಗೂ ವರದಾಯಕ. ಅನೇಕ ದೂರದೃಷ್ಟಿ ಹಾಗೂ ಚಾತುರ್ಯದಿಂದ 2013ರ ಫೆಬ್ರವರಿಯಲ್ಲಿ ಜಯಲಲಿತಾ ಪ್ರಾರಂಭಿಸಿದ 'ಅಮ್ಮ ಉನವಾಗಮ್ ಯೋಜನೆ' ವಿಶೇಷ.

ತಮಿಳುನಾಡಿನ ಅನೇಕ ಕಡೆ ಅಮ್ಮಾ ಕ್ಯಾಂಟೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ರಾಜಧಾನಿ ಚೆನೈ ನಗರವೊಂದರಲ್ಲಿಯೇ 400 ಕ್ಯಾಂಟೀನ್‍ಗಳು ದಿನನಿತ್ಯ ಸಾವಿರಾರು ಜನರಿಗೆ ಆಹಾರ ನೀಡುತ್ತಿದೆ. ಕ್ಯಾಂಟೀನ್‍ಗಳಲ್ಲಿ ನಿತ್ಯವೂ ಬೆಳಗಿನ ಉಪಹಾರಕ್ಕೆ ದಿನಕ್ಕೆ 0.43 ಮಿಲಿಯನ್ ಅಂದರೆ 430 ಸಾವಿರ ಇಡ್ಲಿಗಳು ಮತ್ತು 0.12 ಮಿಲಿಯನ್ ಪ್ಲೇಟ್ ಪೊಂಗಲ್. ಮಧ್ಯಾಹ್ನದ ಊಟಕ್ಕೆ 0.25 ಮಿಲಿಯನ್ ಪ್ಲೇಟ್ ಅನ್ನ ಸಾಂಬಾರ್ ಮತ್ತು 0.11 ಮಿಲಿಯನ್ ಪ್ಲೇಟ್ ಮೊಸರನ್ನ. ರಾತ್ರೆಗೆ 60,000 ಚಪಾತಿಗಳನ್ನು ಉಣಬಡಿಸಲಾಗುತ್ತದೆ. ಜನರೂ ಕಡಿಮೆ ದರದಲ್ಲಿ ಹೊಟ್ಟೆತುಂಬಿದ ಸಂತೋಷದಿಂದ ಹರಸಿ ಹೋಗವ ದೃಶ್ಯ ಸಾಮಾನ್ಯ. ಈ ಯೋಜನೆಗಾಗಿಯೇ ಸರಕಾರ ವಾರ್ಷಿಕ 200-300 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದೆ. ಚೆನೈ ನಗರದಲ್ಲಿಯೇ ದಿನಕ್ಕೆ 1.5 ಲಕ್ಷ ಜನರನ್ನು ಉಣಬಡಿಸಲು 5 ಲಕ್ಷ ರುಪಾಯಿಗಳನ್ನು ಬಳಸಲಾಗುತ್ತಿದೆ. ಇದರಿಂದ ಜನರು ಸುಮಾರು 2,000 ರೂಪಾಯಿಗಳನ್ನು ತಮ್ಮ ಆಹಾರದ ಖರ್ಚಿನಿಂದ ಉಳಿಸಲು ಸಾಧ್ಯವಾಗುತ್ತಿದೆ. ಉಳಿತಾಯದ ಈ ಹಣವನ್ನು ಇತರ ಮೂಲಗಳಿಗೆ ಧನಾತ್ಮಕವಾಗಿ ವಿನಿಯೋಗಿಸಲು ಸಹಾಯ ಮಾಡುತ್ತಿದೆ. ತಮಿಳುನಾಡಿನ ಅನೇಕ ಬಡ, ಅವಿವಾಹಿತ ಉದ್ಯೋಗಿಗಳು, ನಿರಾಶ್ರಿತರ ಜನರು ಆಹಾರಕ್ಕಾಗಿ ತಮ್ಮ ಮನೆಗಳಲ್ಲಿ ಒಲೆಯನ್ನೇ ಹಚ್ಚುವುದಿಲ್ಲ.

ತಮಿಳುನಾಡು ಸರಕಾರದ 2016ರ ಬಜೆಟ್ ದಾಖಲೆಯ ಪ್ರಕಾರ 2011ರಿಂದ 4,331 ಕೋಟಿ ವೆಚ್ಚದಲ್ಲಿ 31,78 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್‍ಗಳನ್ನು ವಿತರಿಸಿದೆ. 7,775 ಕೋಟಿ ವೆಚ್ಚದಲ್ಲಿ 1.76 ಲಕ್ಷ ಫ್ಯಾನ್, ಸ್ಟವ್, ಮಿಕ್ಸಿ, ಗ್ರ್ಯಾಂಡರ್ ಸೆಟ್‍ಗಳನ್ನು ಜನರಿಗೆ ಹಂಚಿದೆ. ಇವುಗಳ ಮುಂದೆ ಪರಿಷ್ಕøತ ದರದಲ್ಲಿ ಆಹಾರ ಒದಗಿಸುತ್ತಿರುವ 200 ರಿಂದ 300 ಕೋಟಿ ಖರ್ಚಿನ ಅಮ್ಮ ಮೆಸ್‍ಗಳಿಗೆ ತಗಲುವ ವೆಚ್ಚ ಕಡಿಮೆಯೆಂದೇ ಹೇಳಬೇಕು. ಇಷ್ಟಿದ್ದೂ ಇಂತಹ ಅನೇಕ "ಉಚಿತ ಯೋಜನೆ"ಗಳಿಗೆ ಸರಕಾರ ಸಾವಿರಾರು ಕೋಟಿಗಳನ್ನು ವಿನಿಯೋಗಿಸುತ್ತಿದೆ. ಆರ್ಥಿಕ ಶಿಸ್ತಿನ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಯೋಜನೆಗೆ ಸಾಧ್ಯವಾಗಿರುವುದು ತಮಿಳುನಾಡಿನ ಆರ್ಥಿಕ ಬೆಳವಣಿಗೆ. 150 ಬಿಲಿಯನ್ ಗ್ರಾಸ್ ಡೊಮೆಸ್ಟಿಕ್ ಸ್ಟೇಟ್ ಪ್ರಾಡಕ್ಟ್(ಜಿ.ಎಸ್.ಡಿ.ಪಿ) ಹೊಂದಿರುವ ದೇಶದ ಎರಡನೇ ಅತೀ ದೊಡ್ಡ ಆರ್ಥಿಕ ಬೆಳವಣಿಗೆಯಿರುವ ರಾಜ್ಯ ತಮಿಳುನಾಡು. ಹಾಗಾಗಿಯೇ ಅದರ ಎಲ್ಲಾ  ಸಾಮಾಜಿಕ ಉದಾರಿ ಯೋಜನೆಗಳು ಅಷ್ಟು ಯಶಸವಿಯಾಗಿ ಸಾಗುತ್ತಿರುವುದು. ರಾಜ್ಯ ಸರಕಾರ ನೀಡುತ್ತಿರುವ ಅಂಕಿ ಸಂಖ್ಯೆಗಳಲ್ಲಿ ನಿಖರತೆ ಇಲ್ಲದಿರಬಹುದು ಆದರೆ ಒಟ್ಟಾರೆ ಚಿತ್ರಣ ಭದ್ರವಾಗಿರುವಂತೆ ತೋರುತ್ತದೆ.

ಅತೀ ಕಡಿಮೆ ವೆಚ್ಚದ ಊಟ ಒದಗಿಸುವ ಯೋಜನೆ ತಮಿಳುನಾಡಿಗೆ ಹೊಸತಲ್ಲ. 1945ರಲ್ಲಿ ಹೆನ್ರಿ ಟ್ರೂಮನ್ ಅಧ್ಯಕ್ಷರಾಗಿದ್ದಾಗ ಅಮೆರಿಕದ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಹಾಗೂ ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಬಿಸಿಯೂಟ ನೀಡುವ "ನ್ಯಾಷನಲ್ ಸ್ಕೂಲ್ ಆಕ್ಟ್" ಜಾರಿಗೆ ತರಲಾಯಿತು. ಅದರ ಯಶಸ್ಸಿನಿಂದ ಆ ಕಾಲದಲ್ಲಿ ಜಗತ್ತಿನಾದ್ಯಂತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಊಟದ ವಿತರಣೆಗೆ ಕಾರಣವಾಯಿತು. ಆದರೆ 1923ರಲ್ಲಿಯೇ ಅಂದರೆ ಅಮೆರಿಕಗಿಂತಲೂ 22 ವರ್ಷಗಳಿಗೆ ಹಿಂದೆಯೇ ಬ್ರಿಟಿಷ್ ಆಡಳಿತವಿದ್ದ  ಮದ್ರಾಸ್ ಪ್ರಾಂತ್ಯದ ಅನೇಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಶಾಲೆಗಳತ್ತ ಆಕರ್ಷಿತರಾಗಿ ಶಿಕ್ಷಣವನ್ನು ಮುಂದುವರೆಸಿದರೋ ಇಲ್ಲವೋ ಗೊತ್ತಿಲ್ಲ. ಆದರೆ ಆಧುನಿಕ ಕಾಲಘಟ್ಟದಲ್ಲಿ ಬೆಳೆಯುವ, ಕಲಿಯುವ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶ ನೀಡುವ ಮೊದಲ ಯೋಚನೆ ಬಹು ಮಹತ್ವದ್ದು. 1960ರ ಸುಮಾರಿಗೆ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಕೆ.ಕಾಮರಾಜ್ ಚೆನೈನಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಪ್ರಾರಂಬಿಸಿದರು. ಕ್ರಮೇಣ ಅದು ಇದರ ಜಿಲ್ಲೆಗಳಿಗೂ ವಿಸ್ತರಿಸಿತು. 1982ರಲ್ಲಿ "ಸತುನಾವು ಥಿತಮ್" ಎಂಬ ಬಹು ಪ್ರಖ್ಯಾತ ಪೌಷ್ಟಿಕಾಂಶ ಕೇಂದ್ರಿತ ಬಿಸಿಯೂಟ ಯೋಜನೆನ್ನು ಎಂಜಿ. ರಾಮಚಂದ್ರನ್ ಜಾರಿಗೆ ತಂದರು. ಇಂದಿಗೂ ತಮಿಳುನಾಡಿನ ಶಾಲೆಗಳಲ್ಲಿ ಅದೇ ಯೋಜನೆ ಮುಂದುವರೆಯುತ್ತಿದೆ. 1990ರ ಹೊತ್ತಿಗೆ ಅದನ್ನು ಕ್ರಮೇಣ 12 ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಜಾರಿಗೆ ತರಲಾಯಿತು. ಅಮ್ಮ ಆ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ಅದನ್ನು ಶಾಲೆಗಳಿಂದ ಪ್ರತಿಯೊಬ್ಬ ಬಡ, ಸೌಲಭ್ಯವಂಚಿತ ಜನಸಾಮಾನ್ಯರತ್ತ ಕೊಂಡೊಯ್ದರು. ಅದೇ ಕಾರಣಕ್ಕೆ ಅಮ್ಮ ಯಶಸ್ವಿಯಾದರು. 2006ರ ಚುನಾವಣೆಯಲ್ಲಿ ಕರುಣಾನಿಧಿ ಎಲ್ಲರಿಗೂ ಉಚಿತ ಟಿ.ವಿ. ನೀಡುವ ಭರವಸೆ ನೀಡಿ ಗೆದ್ದರು. ಜಯಲಲಿತಾ ಅದನ್ನೇ ದಾಳವಾಗಿಟ್ಟುಕೊಂಡು ಲ್ಯಾಪ್ ಟಾಪ್‍ನಿಂದ ನೀರಿನವರೆಗೆ ಸಕಲವನ್ನೂ ಸರಕಾರದ ವೆಚ್ಚದಲ್ಲಿ ನೀಡುತ್ತಾ ಚುನಾವಣೆನ್ನೂ, ಜನರ ನಿಷ್ಟೆಯನ್ನೂ ಗೆಲ್ಲುತ್ತಾ ಬಂದರು.

ನೀಡುವ ಕನಿಷ್ಟ ದರದ ಆಹಾರ ಒಂದೆಡೆಯಾದರೆ ಈ ಯೋಜನೆ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಒದಗಿಸುತ್ತಿರುವ ಉದ್ಯೋಗವೂ ಗಮನಾರ್ಹ. ವಾರ್ಡ್ ಕೌನ್ಸಿಲರ್ ಸಹಾಯದಿಂದ ಆಯಾ ಪ್ರದೇಶದ ಮಹಿಳಾ ಸ್ವಸಹಾಯ ಗುಂಪುಗಳಿಂದ ಕೆಲಸಗಾರರನ್ನು ಆರಿಸಲಾಗುತ್ತದೆ. ಅಲ್ಲಿನ ಹೆಚ್ಚಿನ ಕೆಲಸಗಾರರು ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು. ಪ್ರತೀ ಕ್ಯಾಂಟೀನ್‍ನಲ್ಲೂ 10 ರಿಂದ 16 ಮಹಿಳಾ ಸಿಬ್ಬಂದಿಗಳನ್ನು ಕೆಲಸಕ್ಕೆ ನೇಮಕ ಮಾಡಲಾಗುತ್ತದೆ. ಪಾಲಿಕೆಯ ಮೂಲಕ ತಿಂಗಳಿಗೆ 7,500 ರೂಪಾಯಿಗಳ ಸಂಬಳ ಅವರ ಕೈ ಸೇರುತ್ತದೆ. ಇದು ಅನೇಕ ಮಹಿಳೆಯರ ಪಾಲಿಗೆ ಉದ್ಯೋಗ ಒದಗಿಸಿ ಆರ್ಥಿಕ ಸಾಮಾಜಿಕ ಸಬಲೀಕರಣಕ್ಕೆ ಕಾರಣವಾಗಿರುವ ಯೋಜನೆಯೂ ಕೂಡ. ಲಾಭ ರಹಿತ, ನಷ್ಟಹೀನ ಆಶಯದಿಂದ ಪ್ರಾರಂಭಗೊಂಡ ಕ್ಯಾಂಟೀನ್‍ಗಳು ನಷ್ಟದಿಂದ ಬಳಲುತ್ತಿರುವುದು ಗೊತ್ತಿರದ ಸಂಗತಿಯಲ್ಲ. ಇದು ಭಾರತದ ಎಲ್ಲಾ ಜನಪ್ರಿಯ ಸಾಮಾಜಿಕ ಯೋಜನೆಗಳ ಪರಿಸ್ಥಿತಿಯೂ ಹೌದು. ಆದರೆ ಅದರ ಸಾಮಾಜಿಕ ಪರಿಣಾಮದ ಮುಂದೆ ನಷ್ಟದ ಪ್ರಮಾಣ ಅಪ್ರಸ್ತುತ. ಅದೇ ರೀತಿ ಜನರ ಬಾಯಿಗೆ ಅನ್ನ ನೀಡುವ ಬದಲು ಜನರೇ ಅನ್ನವನ್ನು ಸಂಪಾದಿಸುವಂತೆ ಸಕ್ಷಮಗೊಳಿಸುವ, ಈ ಯೋಜನೆಗಿಂತ ಭಿನ್ನವಾದ ಕ್ರಿಯಾತ್ಮಕ ಯೋಜನೆಗಳನ್ನು ಸರಕಾರಗಳು ರೂಪಿಸಬೇಕು. ಯಾಕೆಂದರೆ ಭೋಗ, ಭಾಗ್ಯಗಳಿಗಿಂತ ಸ್ವಂತ, ಸ್ವಾಭಿಮಾನದ ಬದುಕು ದೊಡ್ಡದು.

ಹಣದುಬ್ಬರದ ಏರಿಳಿತಕ್ಕೆ ಜನರನ್ನು ದೂಡದೆ ಜನರಿಗೆ ಉಪಕಾರ ಮಾಡುತ್ತಿರುವ ಈ ಯೋಜನೆ ಮತ್ತೊಂದು ದೃಷ್ಟಿಯಿಂದ ಬೀದಿ ಬದಿಯ ಸಣ್ಣ ಗಾತ್ರದ ಆಹಾರ ವ್ಯಾಪಾರಿಗಳಿಗೆ ಎಂಬ ಮಾತುಗಳಿವೆ. ಬುದ್ದಿವಂತ ವ್ಯಾಪಾರಿಗಳು ಒಂದೋ ಅಮ್ಮ ಮೆಸ್‍ನಲ್ಲಿ ದೊರೆಯದ ಸಹವರ್ತಿ ಆಹಾರ ಪದಾರ್ಥಗಳನ್ನು ತಯಾರಿಸುವತ್ತ ಮುಖ ಮಾಡಿದರು. ಇನ್ನೂ ಕೆಲವರು ಅಮ್ಮ ಮೆಸ್‍ಗಳು ಇಲ್ಲದ ಜಾಗದಲ್ಲಿ ತಮ್ಮ ತಾಣವನ್ನು ಮಾಡಿ ತಮ್ಮ ಅಸ್ತಿತ್ವವನ್ನೂ ಉಳಿಸಿಕೊಂಡಿದ್ದಾರೆ. ಯೋಜನೆಯ ಎರಡೂ ಮುಖಗಳನ್ನು ನೋಡಿದರೆ ಹಸಿದು ಬಂದವರಿಗೆ ಸರಕಾರಿ ಕ್ಯಾಂಟೀನ್ ಒಂದು ಸಬ್ಸಿಡಿ ದರದಲ್ಲಿ ಆಹಾರ ಒದಗಿಸುತ್ತಿರುವುದು ಬಹುದೊಡ್ಡ ಸಾಧನೆ. ಇಂತಹ ಕ್ರಮಗಳು ಸಂಪದ್ಭರಿತ ರಾಜ್ಯ ಪ್ರಜೆಗಳಿಗೆ ಸಲ್ಲಿಸುವ ಸೇವೆಯಂತೆ, ಮೌರ್ಯ ರಾಜ ಅಶೋಕ ಪ್ರಾಚೀನ ಭಾರತದಲ್ಲಿ ಜಾರಿಗೊಳಿಸಿದ್ದ "ಧಮ್ಮ" ಸಿದ್ದಾಂತದ ಆಧುನಿಕ ರೂಪದಂತೆ ತೋರುತ್ತದೆ.

ಈ ಯೋಜನೆನ್ನು ಜಯಲಲಿತಾ ಎಷ್ಟು ಪರಿಣಾಮಕಾರಿಗೊಳಿಸಿದರು ಎಂದರೆ ಇತ್ತೀಚೆಗೆ ಈಜಿಪ್ಟ್ ಹಾಗೂ ದಕ್ಷಿಣ ಕೊರಿಯಾ ದೇಶದ ಪ್ರತಿನಿಧಿಗಳು ತಮಿಳುನಾಡಿಗೆ ಆಗಮಿಸಿ ತಮ್ಮ ದೇಶಗಳಲ್ಲಿ ಇದನ್ನು ಜಾರಿಗೊಳಿಸಲು ಅಧ್ಯಯನ ನಡೆಸಿ ಯೋಜನೆ ರೂಪಿಸುತ್ತಿರುವುದಕ್ಕೆ ಸಾಕ್ಷಿ. ರಾಜಕೀಯವಾಗಿಯೂ ಹಾಗೂ ಸಾಮಾಜಿಕವಾಗಿಯೂ ಇದು ಬಹಳ ಪ್ರಭಾವಶಾಲಿ. ಅದೇ ಕಾರಣದಿಂದ ದೆಹಲಿಯ ಸರಕಾರವೂ ಬಡಜನರಿಗೆ ಆಮ್ ಆದ್ಮಿ ಮೆಸ್‍ಗಳನ್ನು ತೆರೆಯುವ ಯೋಚನೆ ಮಾಡಿದೆ. ಈ ವರ್ಷದ ಜೂನ್‍ನಲ್ಲಿ ಆಂದ್ರ ಪ್ರದೇಶ ಸರಕಾರ ದಿನಗೂಲಿ ನೌಕರರಿಗೆ ರಾಜ್ಯಾದ್ಯಂತ "ಅಣ್ಣಾ ಎನ್.ಟಿ.ಆರ್. ಕ್ಯಾಂಟೀನ್"ಗಳನ್ನು ತೆರೆಯುವ ಯೋಜನೆಯನ್ನು ಘೋಷಿಸಿದೆ. ಮಧ್ಯಪ್ರದೇಶ ಸರಕಾರವೂ ಬಡವರಿಗಾಗಿ ಇದೇ ರೀತಿಯ ಯೋಜನೆಯನ್ನು ಜಾರಿಗೊಳಿಸುವ ಯೋಚನೆಯಲ್ಲಿದೆ.

ವಿಶ್ವಸಂಸ್ಥೆಯ ಅಂಗಸಂಸ್ಥೆ ಫುಡ್ ಆಂಡ್ ಅಗ್ರಿಕಲ್ಚರಲ್ ಆರ್ಗನೈಸೇಶನ್(ಆಹಾರ ಮತ್ತು ಕೃಷಿ ಸಂಸ್ಥೆ)ನ ಇತ್ತೀಚಿನ "ದಿ ಸ್ಟೇಟ್ ಆಫ್ ಫುಡ್ ಇನ್ಸೆಕ್ಯುರಿಟಿ ಇನ್ ದಿ ವಲ್ಡ್ 2015" (ವಿಶ್ವದ ಆಹಾರ ಅಭದ್ರತೆಯ ಪರಿಸ್ಥಿತಿ 2015)ರ ವರದಿಯ ಪ್ರಕಾರ ಭಾರತದಲ್ಲಿ ದಿನನಿತ್ಯ 194.6 ಮಿಲಿಯನ್ ಅಂದರೆ 19.46 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ನಗರೀಕರಣಗೊಳ್ಳುತ್ತಿರುವ ದೇಶ. ಹಾಗಾಗಿ ಸರಿಯಾದ ಯೋಜನೆ ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಹೊರತು ನಗರೀಕರಣಗೊಂಡಂತೆಲ್ಲ ನಿರಾಶ್ರಿತರ, ಬಡವರ, ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಲಿದೆ. ತಕ್ಷಣದ ಪರಿಸ್ಥಿತಿಯಿಂದ ನೋಡಿದರೆ ಸರಕಾರಗಳ ಕಡಿಮೆ ಮೊತ್ತದ ಆದರೆ ಉತ್ತಮ ಗುಣಮಟ್ಟದ 'ಅಮ್ಮ ಮೆಸ್'ನಂತಹ ಆಹಾರ ಪೂರೈಸುವ ಯೋಜನೆಗಳು ಈ ದೇಶದ ಹಸಿವು ಹಾಗೂ ಪೌಷ್ಟಿಕತೆಯ ಕೊರತೆಯನ್ನು ನೀಗಿಸಿ ದೇಶವನ್ನು ಮತ್ತಷ್ಟು ಉತ್ಪಾದಕಗೊಳಿಸಲು ಸಹಾಯ ಮಾಡುತ್ತವೆ.

ಕರ್ನಾಟಕದಿಂದ ಚಲನಚಿತ್ರ ನಾಯಕಿಯಾಗಿ ಬೆಳೆದು ತಮಿಳುನಾಡಿನ ಜನನಾಯಕಿಯಾಗಿ ಮೆರೆದ ಜಯಲಲಿತ ವಿಧಿವಶರಾಗಿದ್ದಾರೆ. ಒಂದು ವೋಟಿನಿಂದ ವಾಜಪೇಯಿ ಸರಕಾರವನ್ನು ಬೀಳಿಸಿ ದೇಶದ ರಾಜಕಾರಣದಲ್ಲಿ ಸಂಚಲನ ಮೂಡಿಸಿ, ಕಾವೇರಿ ವಿಚಾರದಲ್ಲಿ ಕರ್ನಾಟಕದ ನೆಮ್ಮದಿಯನ್ನು ಕಂಗೆಡೆಸಿದ್ದ ಸೆಲ್ವಿ ಜಯಲಲಿತರನ್ನು ತಮಿಳುನಾಡಿನ ಜನರು ವಿಪರೀತವಾಗಿ ಇಷ್ಟಪಟ್ಟು, ಹುಚ್ಚರಂತೆ ಪೂಜಿಸುತ್ತಿರುವುದಕ್ಕೆ, ಮುಖ್ಯಮಂತ್ರಿಯಾಗಿ ಅನೇಕ ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇ ಪ್ರಮುಖ ಕಾರಣ. ಸಾಕಷ್ಟು ಸಂಪತ್ತನ್ನು ಮಾಡಿದ್ದರೂ ಅದ್ಯಾವುದು ಜಯಾರನ್ನು ಉಳಿಸಲಿಲ್ಲ. ಆದರೆ "ಅಮ್ಮ ಯೋಜನೆ"ಗಳ ಮೂಲಕ ಸಂಪಾದಿಸಿದ್ದ ಲಕ್ಷಾಂತರ ತಮಿಳು ಅಭಿಮಾನಿಗಳ ಪ್ರೀತಿ ಆಕೆಯನ್ನು ತಮಿಳುನಾಡಿನ ಇತಿಹಾಸದಲ್ಲಿ ಅಜರಾಮರಗೊಳಿಸಲಿದೆ.


Tuesday, November 29, 2016

ನೋಟು ರದ್ದತಿಯ ಹಿಂದಿನ ಪೂರ್ವ ತಯಾರಿ.

ನೋಟು ರದ್ದತಿಯ ಹಿಂದಿನ ಪೂರ್ವ ತಯಾರಿ:

ಕಳೆದ ೭೦ ವರ್ಷಗಳಲ್ಲಿ ಭಾರತದ ಪ್ರತೀ ಪ್ರಜೆಗೆ ಬ್ಯಾಂಕ್ ಒಂದರಲ್ಲಿ ಖಾತೆ ತೆರೆಯುವಂತಾಗಲು ಹಿಂದಿನ ಸರಕಾರದ 'ಸ್ವಾಭಿಮಾನ್'ದಂತಹ ಯೋಜನೆಯಿಂದಲೂ ಸಾಧ್ಯವಾಗಲಿಲ್ಲ. ಅದಕ್ಕೆ ಜನಧನ್ ಯೋಜನೆ ಬರಬೇಕಾಯಿತು. ಇದು ಉದ್ಯೋಗ ಖಾತ್ರಿಯಂತಹ ಸರಕಾರದ ೨೬ ಯೋಜನೆಗಳಲ್ಲಿ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಯಾಗುವುದರಿಂದ ಆನೇಕ ರೀತಿಯ ಸೋರಿಕೆ, ಭ್ರಷ್ಟಾಚಾರ ಹಾಗೂ ದಾಖಲೆಗಳ ಕೊರತೆ ಎಲ್ಲದಕ್ಕೂ ಕಡಿವಾಣ ಹಾಕಿದಂತಾಯಿತು. ಅದಕ್ಕೆ ಪೂರಕವಾಗಿ ಕಳೆದ ವರ್ಷದಿಂದ ಜಾರಿಗೆ ತಂದ "ಜಾಮ್ ಟ್ರಿನಿಟಿ" ಯೋಜನೆ, ಅಂದರೆ ವ್ಯಕ್ತಿಯೊಬ್ಬರ ಜನ್ ಧನ್ ಖಾತೆ- ಆಧಾರ್ ಸಂಖ್ಯೆ-ಮೊಬೈಲ್ ಸಂಖ್ಯೆ. ಇವುಗಳನ್ನು ಬೆಸೆಯುವ ಮಹತ್ವದ ಕಾರ್ಯದಿಂದ ಸೋರಿಕೆ, ನಕಲಿ ಫಲಾನುಭವಿಗಳು, ನಕಲಿ ಖಾತೆಯಿಂದ ನಡೆಸಬಹುದಾದ ಮಾರಕ ವ್ಯವಹಾರಗಳನ್ನು ತಡೆಯಲು ಸಾಧ್ಯವಾಗಲಿದೆ. ಇದನ್ನೇ ಭಾನುವಾರದ ಮನ್ ಕಿ ಬಾತ್ ನಲ್ಲಿ ಪ್ರಧಾನಿಯವರು ವ್ಯಕ್ತಪಡಿಸಿರುವ ದೂರದೃಷ್ಟಿಯ ಮನಿ ಕಿ ಬಾತ್, ಇಡೀ ದೇಶವೇ ಮೊಬೈಲ್ ಮೂಲಕ ನೋಟು ರಹಿತ ಆರ್ಥಿಕ ವ್ಯವಹಾರದತ್ತ ಸಾಗಬೇಕೆಂಬ ಇಂಗಿತಕ್ಕೆ ಪೂರಕವಾಗಿ ಬಹಳ ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ ಡಿಜಿಟಲ್ ಬ್ಯಾಂಕಿಂಗ್ ಗೆ ಪೂರ್ವಭೂಮಿಕೆ.

ಡಿಜಿಟಲ್ ಬ್ಯಾಂಕಿಂಗ್ ಎಂಬುದು ಸದಾ ಸಣ್ಣ ವ್ಯಾಪಾರದಿಂದ ದೊಡ್ಡ ಬಟವಾಡೆಯವರೆಗೂ ನೋಟಿನ ಮೂಲಕವೇ ವ್ಯವಹಾರ ಮಾಡಿಕೊಂಡು ಬರುತ್ತಿರುವ ನಮಗೆ ಹೊಸಪರಿಕಲ್ಪನೆಯಂತೆ ತೋರಬಹುದು. ಆದರೆ ಸ್ವಲ್ಪ ಸಮಯ, ಒಂದಷ್ಟು ತಾಳ್ಮೆ ಹಾಗೂ ಕನಿಷ್ಟ ಕಲಿಕೆಯಿಂದ ಮೊಬೈಲ್ ಮೂಲಕವೇ ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರವನ್ನು ಮುಗಿಸಿಬಿಡಬಹುದು. ಇದಕ್ಕಾಗಿ ಬ್ಯಾಂಕ್ ಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಿಲ್ಲ. ಚಿಲ್ಲರೆಗಾಗಿ ಯಾರ ಮುಂದೆಯೂ ಕೈಯೊಡ್ಡುವ ಅಗತ್ಯವಿರುವುದಿಲ್ಲ. ನಮ್ಮೆಲ್ಲ ವ್ಯವಹಾರಗಳ ಪಾರದರ್ಶಕತೆಯ ಜೊತೆ ನಮ್ಮ ಹಣಕಾಸಿನ ಖರ್ಚುವೆಚ್ಚದ ಮೇಲೆ ನಿಗಾ ಇಡಬಹುದು. ಮುಂದುವರೆದ ದೇಶಗಳಲ್ಲಿ ದೈನಂದಿನ ಖರ್ಚುಗಳಿಗೆ ನೋಟಿನ ಬಳಕೆಯೇ ಕಡಿಮೆ. ಖಂಡಿತ ಭಾರತ ಅಷ್ಟು ಮುಂದುವರೆದಿಲ್ಲ. ಮೇಲಾಗಿ ನಗರಗಳಲ್ಲಿ ಅವಕಾಶವಿರುವಂತೆ ಗ್ರಾಮಭಾರತ ಡಿಜಿಟಲೀಕರಣಗೊಂಡಿಲ್ಲ. ಆದರೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಭವಿಷ್ಯವಾಗಲಿದೆ. ದೇಶದ ಪ್ರತೀ ಬ್ಯಾಂಕ್ ಕೂಡ ದಿಶೆಯಲ್ಲಿಯೇ ಹೆಜ್ಜೆ ಇಡುತ್ತಿವೆ. ಡಿಜಿಟಲ್ ಕನಸಿನ ಸಾಕಾರಕ್ಕೆ ಸರಕಾರ ರಿಸರ್ವ್ ಬ್ಯಾಂಕ್ ಮೂಲಕ ಸೂಕ್ತ ನಿಯಮಗಳನ್ನು ರೂಪಿಸುತ್ತಿದೆ.

ಇದನ್ನು ಸಾಕಾರಗೊಳಿಸಲಿಕ್ಕಾಗಿಯೇ ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಪ್ರತೀ ಗ್ರಾಮಕ್ಕೂ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಜೊತೆ ಡಿಜಿಟಲ್ ಬದುಕು, ಡಿಜಿಟಲ್ ಬ್ಯಾಂಕಿಂಗ್ ಕುರಿತೂ ಶಿಕ್ಷಣ ನೀಡುವ ಕಾರ್ಯವನ್ನು ೨೦೧೫ರಿಂದಲೇ ಪ್ರಾರಂಭಿಸಿದೆ. ಮಾಸ್ಟರ್, ವೀಸಾ ಇತ್ಯಾದಿ ವಿದೇಶಿ ಕಾರ್ಡ್ ಗಳನ್ನು ಪ್ರತೀ ಬಾರಿ ಬಳಸಿದಾಗ ಅದರ ಕಮಿಷನ್ ಶುಲ್ಕ ವಿದೇಶಗಳಿಗೆ ಹೋಗುತ್ತಿತ್ತು. ಆದರೆ ಅದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರ ಸ್ವದೇಶಿ "ರೂಪೇ" ಕಾರ್ಡ್ ಗಳನ್ನು ಜಾರಿಗೆ ತಂದಿದೆ. ಮೂಲಕ ರೈಲ್ವೆ, ಪೋಸ್ಟ್, ಜನಧನ್ ಖಾತೆಯವರಿಗೆ, ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹಾಗೂ ಕೆಲವು ಸ್ವಸಹಾಯ ಬ್ಯಾಂಕ್ ಗಳಲ್ಲಿ ಆಟೊಮೆಟೆಡ್ ಟೆಲ್ಲರ್ ಯಂತ್ರದ(.ಟಿ.ಎಂ. ಡೆಬಿಟ್ ಕಾರ್ಡ್) ಸೌಲಭ್ಯವನ್ನು ಒದಗಿಸಿ ಡಿಜಿಟಲ್ ಬ್ಯಾಂಕಿಂಗ್ ಮಹತ್ವದ ಮೈಲಿಗಲ್ಲಾದ ಕಾರ್ಡ್ ಬ್ಯಾಂಕಿಂಗ್ ವೆಚ್ಚ ತಗ್ಗಿಸಿ ಜನರಿಗೆ ನೋಟುರಹಿತ ವ್ಯವಹಾರವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಕೇವಲ ನೋಟಿನ ಕಾರಣದಿಂದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ನಿರಾಕರಣೆಯಾಗುವುದಿಲ್ಲ. ಶಾಲಾ ಕಾಲೇಜುಗಳಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ ಯಾವುದೇ ತೋಡಕಾಗುವುದಿಲ್ಲ. ಇವೆಲ್ಲವು ನೋಟಿನ ರದ್ಧತಿಯ ಹಂದಿನ ಪೂರ್ವತಯಾರಿಯಂತೇಕೆ ತೋರುವುದಿಲ್ಲ?

ನಾವು ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಜಾಲತಾಣದ ಉದ್ದಗಲವನ್ನು ಕಲಿತು ಅದಕ್ಕೆ ಜೋತುಬಿದ್ದಿದ್ದೇವೆ. ಆದರೆ ಮೊಬೈಲ್ ಮೂಲಕ ಬ್ಯಾಂಕಿಂಗ್ ಮಾಡಲು ಹಿಂದೇಟಾಕುತ್ತೇವೆ. ಮಾಹಿತಿ ಸುರಕ್ಷತೆಯ ಕಾಳಜಿ ನಿಜವಾದರೂ ಬಳಸಲು ಒಪ್ಪದ ಸಾಂಪ್ರದಾಯಿಕ ಮನಸ್ಥಿತಿಯೇ ಇದಕ್ಕೆ ಮೂಲ ಕಾರಣ. ನಾವು ನೋಟನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವಾಗ ಜಾಗೃತರಾಗಿರುವುದಿಲ್ಲವೆ? ಹಾಗೆಯೇ ಇದಕ್ಕೂ ಗರಿಷ್ಟ ಜಾಗೃತಿಯ ಅಗತ್ಯವಿದೆ. ಆದರೆ ಒಮ್ಮೆ ಖಾತೆಗೆ ಜಮಾ ಆದ ಹಣ ಬೇಜವಾಬ್ದಾರಿತನದಿಂದಲ್ಲದೆ ಯಾರೂ ತೆಗೆದುಕೊಳ್ಳುತ್ತಾರೆಂಬ ಭಯವಿಲ್ಲ. ಬಡ ಹಾಗೂ ಮಧ್ಯಮವರ್ಗಕ್ಕೆ ಅಂತರ್ಜಾಲದಲ್ಲಿ ನಂಬಿಕಸ್ಥ ತಾಣಗಳಿಂದ ವ್ಯಾಪಾರ ಮಾಡುವುದರಿಂದ ಭೌತಿಕ ಮಾರುಕಟ್ಟೆಯಲ್ಲಿ ಸಿಗುವ ಲಾಭಗಳಿಗಿಂತ ಹೆಚ್ಚಿನ ಲಾಭವಾಗುತ್ತದೆ. ವಿದ್ಯುತ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್... ಹೀಗೆ ಬೆಳೆಯುವ ಬಿಲ್ ಗಳನ್ನು ಪಾವತಿಸುವುದಕ್ಕಾಗಿ ವಿನಿಯೋಗಿಸುವ ಸಮಯದ, ಶ್ರಮದ ಕಾಲುಭಾಗ ಡಿಜಿಟಲ್ ಬ್ಯಾಂಕಿಂಗ್ ಗೆ ತಗಲುತ್ತದೆ. ಮೇಲಾಗಿ ತರವೇಹಾರಿ ಕಡಿತ, ಹಣ ಮರುಪಾವತಿಯ ಲಾಭಗಳು. ಇವೆಲ್ಲ ಕೇವಲ ನಮ್ಮ ಲಾಭಕ್ಕಾಗಿ ಮಾತ್ರವಲ್ಲ, ಕಪ್ಪುಹಣ ರೂಪುಗೊಳ್ಳುವಿಕೆಯ ರಹದಾರಿಯೊಂದನ್ನೇ ಕೊನೆಗಾಣಿಸಿ ದೇಶದ ಆರ್ಥಿಕ ಸ್ವಾಸ್ಥ್ಯದ ಹಿತವನ್ನೇ ಕಾಪಾಡುವ ದೇಶಸೇವೆಯ ಕಾರ್ಯವೂ ಕೂಡ. ದೇಶದ ಆರ್ಥಿಕ ಪ್ರಗತಿಯ, ಸಾಮಾಜಿಕ ಬೆಳವಣಿಗೆಗೂ ಉಪಯೋಗಕಾರಿ.


ಕಪ್ಪು ಹಣ ಎಂಬುದೇ ಅವಾಸ್ತವಿಕ, ಅದರ ಹೆಸರನ್ನು ಹೇಳಲೂ ಮುಖ ಕಪ್ಪಾಗಿಸಿಕೊಳ್ಳುತ್ತಿದ್ದ ಜನನಾಯಕರ ನಡುವೆ ಅಧಿಕಾರ ಸ್ವೀಕರಿಸಿದ ತಕ್ಷಣ ಮೊತ್ತ ಮೊದಲಿಗೆ ವಿದೇಶದಲ್ಲಿರುವ ಕಪ್ಪುಹಣದ ಕುರಿತು ತನಿಖೆ ನಡೆಸಲು ಸ್ಪೆಶಲ್ ಇನ್ವೆಸ್ಟಿಗೇಶನ್ ಟೀಮ್(ಎಸ್..ಟಿ.) ರಚಿಸಿದ್ದು ದಕ್ಷ ಸರಕಾರ ಮಾತ್ರ ಮಾಡುವ ಕೆಲಸ. ಮೊದಲ ವರ್ಷದಲ್ಲೇ ಜಿ೨೦ ದೇಶಗಳ ಜೊತೆಗೂಡಿಾ ದೇಶಗಳಲ್ಲಿರುವ ಭಾರತದ ಕಪ್ಪುಹಣದ ಮಾಹಿತಿ ವಿನಿಮಯಕ್ಕೆ ಪ್ರಯತ್ನಿಸಿದ್ದು ಸಣ್ಣ ಸಾಧನೆಯೇನಲ್ಲ. ಮಾರಿಷಸ್ ನಂತರ ಸೈಪ್ರಸ್ ದೇಶದೊಂದಿಗೆ ತೆರಿಗೆ ಅನ್ವಯ ಒಪ್ಪಂದವನ್ನು ಜಾರಿಗೆ ತಂದಿದ್ದು ಕಪ್ಪುಹಣವೆಂಬ ಬೃಹತ್ ಕಣಿವೆಯನ್ನು ಬಗೆಯುವ ಪ್ರಾರಂಭಿಕ ಹೆಜ್ಜೆಗಳು. ಹಾಗೆಯೇ ಕಪ್ಪು ಹಣ ಹೊಂದಿರುವವರು ತಾವೇ ಸ್ವಪ್ರೇರಣೆಯಿಂದ ದಂಡ ಕಟ್ಟಿ ಎಂದು ಕರೆಕೊಟ್ಟು, ೩೦ ಸೆಪ್ಟೆಂಬರ್ ೨೦೧೬ರ ವರೆಗೂ ಗಡುವು ಕೊಟ್ಟಿದ್ದು ಸರಕಾರ ದೆಸೆಯಲ್ಲಿ ಪ್ರಾರಂಭದಿಂದಲೂ ಸಾಗುತ್ತಿತ್ತು ಎಂಬುದಕ್ಕೆ ಸಾಕ್ಷಿ. ಮುಂದಿನ ನಡೆ ಏನಿರಬಹುದು ಎಂಬುದು ಬೃಹತ್ ಉದ್ದಿಮೆದಾರರಿಗೂ, ರಾಜಕೀಯ ಪಕ್ಷಗಳಿಗೂ, ಕಾಳಧನಿಕರಿಗೂ ಸೂಚನೆ ದೊರೆತಿತ್ತು. ಆದರೆ ಯಾರೊಬ್ಬರೂ ೫೦೦, ೧೦೦೦ದ ನೋಟುಗಳನ್ನು ಪರಿಯ ಮನೋವೇಗದಲ್ಲಿ ರದ್ದಾಗಿಸಬಹುದೆಂದು ಊಹಿಸಿರಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಯೋಜನೆ ಘೋಷಿಸುವ ಮುನ್ನ ನಡೆದ ಕ್ಯಾಬಿನೆಟ್ ಸಭೆಯ ತನಕವೂ ಸ್ವತಃ ವಿತ್ತ ಸಚಿವರಿಗೇ ಅದರ ಬಗ್ಗೆ ಮಾಹಿತಿ ಇರಲಿಲ್ಲ ಅಂದರೆ ಇದು ಎಂತಹ ಕಾರ್ಯಯೋಜನೆಯಿರಬೇಕು. ಪಾಕಿಸ್ತಾನದ ಮೇಲೆ ಚಿಕಿತ್ಸಕ ದಾಳಿ ನಡೆದಷ್ಟೇ ಒಪ್ಪವಾಗಿ, ಪ್ರತಿಯೋಚನೆ ಮಾಡುವುದಕ್ಕೂ ಅವಕಾಶವಿಲ್ಲದಂತೆ ನಡೆಸಿದ ದಾಳಿ ೧೯೯೧ರ ನಂತರ ದೇಶದ ಅತೀ ಮಹತ್ವದ ಆರ್ಥಿಕ ಸುಧಾರಣೆ. ಕಳೆದ ೭೦ ವರ್ಷಗಳ ಭಾರತದ ರಾಜಕಾರಣದ ಜಡ್ಡು ವ್ಯವಸ್ಥೆಯನ್ನೇ ಈಗಿನ ಪ್ರಧಾನಿಗಳಿಗೂ ಸಮೀಕರಿಸಿ, ಕೊನೆಗೆ ಇವರೂ ರಾಜಕಾರಣಿಯೇ. ಹಾಗಾಗಿ ಇವರು ಅಂತಹ ನಿರ್ಣಯವನ್ನು ಕೈಗೊಳ್ಳುವುದೇ ಇಲ್ಲ ಎಂದು ನಿರ್ಧರಿಸಿ ನವೆಂಬರ್ ರವರೆಗೂ ಅನೇಕರು ಹಾಗೂ ಈಗ ಭಾರತ್ ಬಂದ್ ಗೆ ಕರೆನೀಡಿರುವ ಪಕ್ಷಾತೀತ, ಧರ್ಮನಿರಪೇಕ್ಷ, ಸಮಾಜವಾದಿ, ಬಹುಜನರು, ಭ್ರಷ್ಟಾಚಾರ ವಿರೋಧಿ ಆಂಡೋಲನವನ್ನೇ ತಮ್ಮ ರಾಜಕೀಯ ಬಂಡವಾಳ ಮಾಡಿಕೊಂಡ ಸಮಸ್ತ ಬಾಂಧವರೂ ಮೈಮರೆತಿದ್ದರು. ಬುದ್ಧಿವಂತರು, ಪ್ರಧಾನಿಯವರ ಸಾಮರ್ಥ್ಯವನ್ನು ಮೊದಲೇ ಊಹಿಸಿದವರು 'ಜಿಯೋ' ಎಂದರು. ಉಳಿದವರು ಈಗ ಎಚ್ಚೆತ್ತು 'ಜಿಯಾ' ಎನ್ನುತ್ತಿದ್ದಾರೆ.

ಸುಖಾ ಸುಮ್ಮನೆ ಯಾವುದೇ ಪೂರ್ವ ತಯಾರಿಯಿಲ್ಲದೆ ನಿರ್ಣಯ ಕೈಗೊಳ್ಳಲಾಗಿದೆ ಎಂಬುವರು ಮೇಲಿನ ಮಾಹಿತಿಯನ್ನು ಓದಿ ತಮ್ಮನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಇನ್ನು ಬ್ಯಾಂಕಿಂಗ್ ವ್ಯವಹಾರದಲ್ಲಿ ಆಗುತ್ತಿರುವ ಹೊಸ ನೋಟಿನ ಕೊರತೆ ಹಾಗೂ ವಿತರಣೆ, ಸಿಬ್ಬಂದಿ ಕೊರತೆ ಇತ್ಯಾದಿ ಹೆಚ್ಚಿನ ತೊಡಕುಗಳಿಗೆ ಬ್ಯಾಂಕ್ ಗಳ ನಾನ್ ಪರ್ಫಾಮಿಂಗ್ ಅಸೆಟ್ ರೀತಿಯ ಅನೇಕ ಆಂತರಿಕ, ಆಡಳಿತಾತ್ಮಕ ಸಾಂಸ್ಥಿಕ ತೊಡಕುಗಳೇ ನೇರವಾಗಿ ಕಾರಣವೇ ಹೊರತು ಎಲ್ಲದಕ್ಕೂ ಸರಕಾರವೇ ನೇರವಾಗಿ ಹಾಗೂ ಪೂರ್ಣವಾಗಿ ಹೊಣೆಯಲ್ಲ. ಬ್ಯಾಂಕ್ ನೌಕರರನೇಕರು ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುತ್ತಿದ್ದಾರೆ. ಅದೇ ರೀತಿ ಜನರೊಂದಿಗೆ ಬೇಜವಾಬ್ದಾರಿಯಾಗಿ, ಅಹಂಕಾರದಿಂದ ವರ್ತಿಸುವ ಕೆಲವಾರು ಅಧಿಕಾರಿ, ಸಿಬ್ಬಂದಿಗಳು ಅನೇಕ ಜನರನ್ನು ಹತಾಶೆಗೊಳಿಸಿದ್ದು ಸುಳ್ಳಲ್ಲ. ಅದೇ ಕಾರಣದಿಂದ ಜನರು ಬ್ಯಾಂಕ್ ಗಳತ್ತ ಮುಖ ಮಾಡಲೂ ಹೆದರುತ್ತಿರುವುದು. ಗ್ರಾಮೀಣ ಭಾಗದಲ್ಲಿ ಬ್ಯಾಂಕೇತರ ಆರ್ಥಿಕತೆ ರೂಪುಗೊಳ್ಳುವುದಕ್ಕೆ ಇಂತಹ ವರ್ತನೆಯೂ ಕಾರಣ. ತಪ್ಪು ಮಾಹಿತಿ, ಸುಳ್ಳು ಸುದ್ದಿ ಹಾಗೂ ಬ್ಯಾಂಕಿಗ್ ಸೇವೆಯಿಂದ ವಂಚಿತರಾಗಿ ವಿಚಲಿತರಾಗುವ ಜನರು ತಮ್ಮ ಪ್ರಾಣ ಕಳೆದುಕೊಳ್ಳುವ ನಿರ್ಧಾರ ಕೈಗೊಂಡಿದ್ದರೆ ಅದಕ್ಕೆ ಬ್ಯಾಂಕ್ ಗಳ ಕಾರ್ಯನಿರ್ವಹಣೆಯ ರೀತಿ ಕಾರಣ. ಸರಕಾರದ ಸರಿಯಾದ ನಿರ್ಧಾರವಲ್ಲ.

ಬೇನಾಮಿ ಸಂಪತ್ತು ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಅಕ್ರಮ ಸಂಪತ್ತು, ಹಣ, ಸೈಟು-ಭೂಮಿಗಳ ಮೇಲೆ ರಿಯಲ್ ಎಸ್ಟೇಟ್ ನವರು ತೊಡಗಿಸಿರುವ ಕಪ್ಪುಹಣದ ಮತ್ತೊಂದು ಮೂಲದ ಜಾಡನ್ನು ಬಗೆಯುವ ಪ್ರಯತ್ನವೂ ನಡೆಯಲಿದೆ. ಆದರೆ ಕ್ರಮ ತತ್ಕಾಲಿಕವಾಗಿ ಯಶಸ್ವಿಯಾಗಿ ತೋರುತ್ತದೆಯಷ್ಟೆ. ಚಿನ್ನ, ವಿದೇಶಿ ಕರೆನ್ಸಿ ವಿನಿಮಯ, ಹವಾಲ, ಪಾರ್ಟಿಸಿಪೇಟರಿ ನೋಟ್ಸ್, ವಿದೇಶಗಳಲ್ಲಿ ಹೂಡಿರುವ ಸಂಪತ್ತು, ಕಾಳಧನ ಹಾಗೂ ಇನ್ನಿತರ ಮೂಲಗಳಿಂದ ಕಾಳಧನದ ಚಟುವಟಿಕೆಗಳು ಮುಂದುವರೆಯಲಿದೆ. ನೋಟಿನ ರದ್ದತಿಯ ನಿರ್ಧಾರ ನಿರ್ಣಾಯಕವೂ ಅಲ್ಲ. ಅಂತಿಮವೂ ಅಲ್ಲ. ಯೋಜನೆಯಿಂದ ಕಪ್ಪುಹಣ ದೇಶದಿಂದ ಸರ್ವಸಮಗ್ರವಾಗಿ ತೊಲಗುವುದಿಲ್ಲ. ಅದಕ್ಕಾಗಿ ಸರಕಾರ ಅನೇಕ ಸಾಂಸ್ಥಿಕ ಸುಧಾರಣೆಗಳನ್ನು ಸಮಯದಿಂದ ಸಮಯಕ್ಕೆ ಸರಿಯಾಗಿ ಜಾರಿಗೊಳಿಸದ ಹೊರತು ಕಪ್ಪು ಹಣ ಮತ್ತೊಂದು ಸ್ವರೂಪದಲ್ಲಿ ತನ್ನ ಕಬಂಧಬಾಹುವನ್ನು ವಿಸ್ತರಿಸಿ ಪರ್ಯಾಯ ಆರ್ಥಿಕತೆಯನ್ನು ಮುಂದುವರೆಸಲಿದೆ. ಆದರೆ ಇರುವ ಸಾಧ್ಯತೆಯಲ್ಲಿಯೇ ಸುಧಾರಣೆ ತರುವುದು, ಮಾಡಿದ ಉತ್ತಮ ಕಾರ್ಯಕ್ಕೆ ಅಡ್ಡಗಾಲು ಹಾಕುವುದಕ್ಕಿಂತ ಲಕ್ಷ ಪಾಲು ಉತ್ತಮ. ಹೀಗೆ ತನು, ಮನ, 'ಧನ' ತ್ರಿಕರಣಗಳ ಶುದ್ಧಿಯ ಮುಖೇನ ದೇಶದೊಳಗಿನ ಕಾಳಧನದ ಸ್ವಚ್ಛತೆ ಸಾಧ್ಯವಾಗಲಿದೆ. ಸೂಚನೆಯ ಜಾರಿಯನ್ನು 'ಧನಾ'ತ್ಮಕವಾಗಿ ಗಮನಿಸಿದಾಗ 'ಸ್ವಚ್ಛ ಭಾರತ್' ಮತ್ತೊಂದು ಆಯಾಮವನ್ನು ಪಡೆದು ನಿಂತಿರುವಂತೆ ಕಾಣುತ್ತದೆ.


-ಶ್ರೇಯಾಂಕ ಎಸ್ ರಾನಡೆ.